ಮಡಿಕೇರಿ, ಫೆ. ೯: ದಿಢೀರ್ ಜ್ವರ ಬಂದು, ಪಾದದ ಬಳಿ ಕೀವು ತುಂಬಿ, ಇಡೀ ಕಾಲು ಕತ್ತರಿಸಬೇಕಾಗಿ ಬಂದು, ಮನೆಯಲ್ಲೇ ಉಳಿದಿರುವ ಮಡಿಕೇರಿ ನಗರಸಭೆಯ “ಸ್ಯಾನಿಟರಿ ಸೂಪರ್ ವೈಜ಼ರ್” ಓಬಳೇಶ್ (ಓಬ್ಳಿ) ಜೊತೆ ಅವರ ನೆಚ್ಚಿನ ಶ್ವಾನ “ಮಗ” ಕೂಡ ಮನೆಯಲ್ಲೇ ಉಳಿದಿದೆ. ಮನೆಯವರು ಶ್ವಾನವನ್ನು ಪ್ರೀತಿಯಿಂದ “ಮಗ” ಎಂದೇ ಕರೆಯುವುದು! ಶ್ವಾನ ಮನೆಯಲ್ಲೇ ಇರುವದು ವಾಡಿಕೆ.

ಈ “ಮಗ”ನದ್ದೇನು ವಿಶೇಷ ಎಂದು ಅನಿಸಬಹುದು. ಓಬಳೇಶ್ ಅವರು ನಗರಸಭೆಯಲ್ಲಿ ತಮ್ಮ ಹದಿನೆಂಟನೇ ವಯಸ್ಸಿನಿಂದಲೇ ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ದುಡಿಯುತ್ತಿದ್ದಾರೆ. ಎರಡು ದಶಕ ಕಳೆಯುವಷ್ಟರಲ್ಲಿ ಕುಟುಂಬಕ್ಕೆ ಹೊಸ ಸದಸ್ಯನಂತೆ ಈ “ಮಗ”ನ ಆಗಮನವಾಗಿದೆ. ಶ್ವಾನಕ್ಕೆ ಈಗ ಹದಿನಾರು ವರುಷ. ಶ್ವಾನಕ್ಕೆ ಒಂದು ವರುಷ ಕಳೆಯುತ್ತಲೇ ಓಬಳೇಶ್ ಅವರೊಂದಿಗೆ ನಗರ ಪ್ರದಕ್ಷಿಣೆ ಆರಂಭಿಸಿತು. ಬೆಳಿಗ್ಗೆ ೫-೫.೩೦ಕ್ಕೆ ಓಬಳಿಯ ಓಡಾಟ ಆರಂಭವಾಗುತ್ತದೆ. “ಮಗ” ಕೂಡ ಅವರೊಂದಿಗೆ ಪೇಟೆ ಸುತ್ತಾಡಿ ಎಲ್ಲಾದರೂ ಕ್ಯಾಂಟೀನ್, ಹೊಟೇಲ್‌ನಲ್ಲಿ ಜೊತೆಗೇ ತಿಂಡಿ ಮುಗಿಸಿ ಮರಳಿ ಬರುತ್ತಿತ್ತು. ಸುಮಾರು ಹದಿನೈದು ವರುಷದ ಓಡಾಟದ ಬಳಿಕ ಇದೀಗ ಮಾಲೀಕ ಮನೆಯೊಳಗೇ ಇರುವುದನ್ನು ಗಮನಿಸಿ “ಮಗ” ಗಲಿಬಿಲಿಯಲ್ಲಿದ್ದಂತಿದೆ. ಮೊದಲು ಓಬಳಿಯ ಪಾದ ತೆಗೆಯಬೇಕಾಗಿ ಬಂತು. ಅವರಿಗೆ ಅದರ ಅರಿವು ಆದುದು ಬ್ಯಾಂಡೇಜ್ ತೆಗೆದ ಬಳಿಕವಷ್ಟೇ. ಓಡಾಡುತ್ತಿದ್ದ ಗಟ್ಟಿ ಶರೀರಕ್ಕೆ ಈ ಸ್ಥಿತಿ ಬಂತೆAದು ಕಣ್ಣೀರಿಟ್ಟ ಓಬಳೇಶ್ ಮೂರು ತಿಂಗಳ ಕಾಲ ಮಲಗುವ ಕೋಣೆಯಿಂದ ಹೊರ ಬರಲೇ ಇಲ್ಲ. ಕನಿಷ್ಟ ಆಹಾರ ಸೇವಿಸಿ ಬದುಕಿದರು. ಚಿಂತೆ ಮತ್ತು ಕಾಲಿನ ಅಲಕ್ಷö್ಯದಿಂದ ಮತ್ತೆ ಮಂಡಿಯಿAದಲೇ ಕಾಲು ತೆಗೆಯಬೇಕಾಗಿ ಬಂದಿತು.

ನಿನ್ನೆ ರೋಟರಿ ವುಡ್ಸ್ ಮೂಲಕ ಮನೆಯಲ್ಲಿ ವೆರಾಂಡದಲ್ಲಿ ಕುಳಿತಿದ್ದ ಓಬಳೇಶ್ ಅವರಿಗೆ ಕೃತಕ ಕಾಲು ನೀಡಲಾಯಿತು. “ಇದ್ಯಾರು ಬಂದಿರೋದು, ಯಜಮಾನನ ಸುತ್ತ ನಿಂತು ಇವರೇನು ಮಾಡುತ್ತಿದ್ದಾರೆ” ಎಂದು ಇಳಿ ವಯಸ್ಸಿನ “ಮಗ” ಮೆಟ್ಟಲು ಹತ್ತಿ ನಿಂತು ನೋಡುತ್ತಿದ್ದ ಪರಿ ನೋಡಿ. ಫೋಟೋ ಕ್ಲಿಕ್ಕಿಸಿದರೂ ಶ್ವಾನ ಮಾತ್ರ ಮೂಕ ಲಹರಿಯಲ್ಲಿ ಮುಳುಗಿತ್ತು.

-ಬಿ.ಜಿ. ಅನಂತಶಯನ