, ಫೆ. ೯: ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯ ನಡುವೆಯೂ ನೀರಿನ ಒರತೆಯಲ್ಲಿಯೇ ತ್ರಾಸಪಟ್ಟು ಭತ್ತ ಬೆಳೆದ ಹಾರಂಗಿ ಅಚ್ಚುಕಟ್ಟಿನ ಕೃಷಿಕರು ಇದೀಗ ಭತ್ತದ ಒಕ್ಕಲುತನದಲ್ಲಿ ನಿರತರಾಗಿದ್ದಾರೆ.

ಮಳೆಯನ್ನು ಸಕಾಲಿಕವಾಗಿ ಸುರಿಸದ ನಿಸರ್ಗದ ಶೋಷಣೆ ಹಾಗೂ ರಾಜ್ಯ ಸರ್ಕಾರದ ಬರಗಾಲದ ಘೋಷಣೆಯ ನಡುವೆಯೂ ಮನೆ ಮಂದಿಯ ಕೂಳಿಗಾಗುವಷ್ಟು ಭತ್ತವನ್ನು ಬೆಳೆದದ್ದೇ ರೈತರ ಈ ಬಾರಿಯ ಸಾಧನೆಯಾಗಿದೆ.

ಸಕಾಲಿಕವಾದ ಮಳೆಯಾಗದ ಕಾರಣ ಭತ್ತದ ಫಸಲು ಅಷ್ಟಾಗಿ ಇಳುವರಿ ಇಲ್ಲ. ಆದರೆ, ಭತ್ತದ ಫಸಲಿನಲ್ಲಿ ಇಳುವರಿ ಇಲ್ಲದಿರುವುದು ಭತ್ತ ಹಾಗೂ ಅಕ್ಕಿ ಹಾಗೂ ಭತ್ತದ ಹುಲ್ಲುಗಳ ದರ ಏರಿಕೆಯಾಗಿರುವುದು ಮಾತ್ರ ಭತ್ತದ ಬೆಳೆಯ ಕೃಷಿಕರಲ್ಲಿ ಮಂದಹಾಸ ಮೂಡಿಸಿದೆ.

ಅಂದರೆ, ಕಳೆದ ಹಲವಾರು ದಶಕಗಳಿಂದ ಆಳುವ ಸರ್ಕಾರಗಳು ಘೋಷಿಸಿ ಉಚಿತವಾಗಿ ರಾಜ್ಯದ ಮನೆ ಮಂದಿಗೆ ವಿತರಿಸುತ್ತಿದ್ದ ಅಕ್ಕಿ ಹೇಗಿದ್ದರೂ ಮನೆ ಬಾಗಿಲಿಗೆ ಬಂದು ಬೀಳುವುದರಿಂದ ಭತ್ತ ಬೆಳೆದು ಏನಾಗಬೇಕು ಎಂಬ ಆಲಸ್ಯ ಹಾಗೂ ಅಸಡ್ಡೆ ಬಹಳಷ್ಟು ಮಂದಿ ಕೃಷಿಕರು ಹಾಗೂ ಕೂಲಿ ಕಾರ್ಮಿಕರಲ್ಲಿತ್ತು. ಜೊತೆಗೆ ಸರ್ಕಾರವೂ ಕೂಡ ರೈತರಿಗೆ ಬೆಂಬಲ ಬೆಲೆ ನೀಡದೇ ಇದ್ದುದರಿಂದ ಭತ್ತ ಬೆಳೆಯಲು ಆದಾಯಕ್ಕಿಂತ ವೆಚ್ಚವೇ ಜಾಸ್ತಿ ಎಂಬ ವಾಸ್ತವ ಈ ಬಾರಿ ದೂರವಾಗಿದೆ.

ಅಂದರೆ, ಭತ್ತದ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ನಗರ ಪಟ್ಟಣ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚಿನ ಮಂದಿ ಅತ್ಯಂತ ಹೆಚ್ಚಾಗಿ ಬಳಸುವ ರಾಜಮುಡಿ ಎಂಬ ಅಕ್ಕಿಯ ಬೆಲೆ ಮಾರುಕಟ್ಟೆಯಲ್ಲಿ ೧೦೦ ರೂ.ಗಳ ಸಮೀಪ ತಲುಪಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ರಾಜಮುಡಿ ಭತ್ತಕ್ಕೆ ೩೦೦೦ ರೂ. ಇದ್ದದ್ದು ಈ ಬಾರಿ ಏಕಾಏಕಿ ದುಪ್ಪಟ್ಟಾಗಿದೆ.

ಜೊತೆಗೆ ಶುಂಠಿ ಬಿತ್ತನೆಗೆ ಭತ್ತದ ಹುಲ್ಲಿಗೆ ಭಾರೀ ಬೇಡಿಕೆ ಇರುವ ಕಾರಣ ಹುಲ್ಲಿಗೂ ಉತ್ತಮ ದರ ದೊರಕುತ್ತಿರುವುದರಿಂದ ಭತ್ತದ ಪಸಲು ಬೆಳೆಯಲು ‘ಕೃಷಿ’ಕರಲ್ಲಿ ಲಾಭದಾಯಕವಾದ ‘ಖುಷಿ’ ಕಾಣುತ್ತಿರುವ ಕಾರಣ ಮುಂದಿನ ಬಾರಿ ಉತ್ತಮ ಮಳೆಯಾದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ದುಪ್ಪಟ್ಟಾಗಲಿದೆ.

- ಕೆ.ಎಸ್. ಮೂರ್ತಿ