ಸೋಮವಾರಪೇಟೆ, ಫೆ. ೧೦: ಸಮೀಪದ ಕಾಜೂರು ಗ್ರಾಮದಲ್ಲಿನ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಸಂದರ್ಭ, ರೋಷಗೊಂಡು ಕಾಡಾನೆ ಆರ್‌ಆರ್‌ಟಿ ಸಿಬ್ಬಂದಿಗಳ ಮೇಲೆಯೇ ಧಾಳಿಗೆ ಯತ್ನಿಸಿ, ಬೈಕ್‌ನ್ನು ಜಖಂಗೊಳಿಸಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಕಾಜೂರು ಗ್ರಾಮದ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ಕಳೆದ ಕೆಲ ದಿನಗಳಿಂದ ಬೀಡುಬಿಟ್ಟಿರುವ ಮದವೇರಿದ ಕಾಡಾನೆಯನ್ನು ಇಂದು ಬೆಳಿಗ್ಗೆ ೭.೩೦ರ ಸುಮಾರಿಗೆ ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಆರ್‌ಆರ್‌ಟಿ ತಂಡದವರು ಅರಣ್ಯಕ್ಕೆ ಅಟ್ಟುವ ಸಂದರ್ಭ, ರೋಷಗೊಂದು ಸಿಬ್ಬಂದಿಗಳ ಮೇಲೆಯೇ ಧಾಳಿಗೆ ಯತ್ನಿಸಿದೆ.

ಈ ಸಂದರ್ಭ ಸಿಬ್ಬಂದಿಗಳು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದರಿಂದ ಮತ್ತಷ್ಟು ರೋಷಗೊಂಡ ಕಾಡಾನೆ ರಸ್ತೆ ಬದಿಯಲ್ಲಿ

(ಮೊದಲ ಪುಟದಿಂದ) ನಿಲ್ಲಿಸಿದ್ದ ಬೈಕ್‌ನ್ನು ಒದ್ದು ಜಖಂಗೊಳಿಸುವ ಮೂಲಕ ತನ್ನ ಆಕ್ರೋಶವನ್ನು ತಣಿಸಿಕೊಂಡಿದೆ.

ಕಾಜೂರು ಅರಣ್ಯ ಪ್ರದೇಶಕ್ಕೆ ಒತ್ತಿಕೊಂಡಿರುವ ಕಾಫಿ ಎಸ್ಟೇಟ್‌ನೊಳಗೆ ಕಳೆದ ಕೆಲ ಸಮಯದಿಂದ ಒಂಟಿ ಕಾಡಾನೆ ಬೀಡುಬಿಟ್ಟಿದ್ದು, ಇದೀಗ ಮದವೇರಿಸಿಕೊಂಡಿರುವ ಹಿನ್ನೆಲೆ ಮನಸೋಯಿಚ್ಛೆ ಓಡಾಡುತ್ತಿದೆ. ಇದರಿಂದ ಸ್ಥಳೀಯರು ಜೀವ ಭಯದಿಂದಲೇ ದಿನದೂಡುವಂತಾಗಿದೆ.

ಇAದು ಬೆಳಿಗ್ಗೆ ಗಾರ್ಡ್ ಶ್ರೀಕಾಂತ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಹರ್ಷಿತ್, ವಿನು, ದರ್ಶನ್, ಮುತ್ತಪ್ಪ ಅವರುಗಳ ತಂಡ ತೋಟದೊಳಗೆ ಬೀಡುಬಿಟ್ಟಿದ್ದ ಕಾಡಾನೆಯನ್ನು ಕಾಜೂರು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂದರ್ಭ ರೋಷಗೊಂಡ ಕಾಡಾನೆ ಸಿಬ್ಬಂದಿಗಳ ಮೇಲೆಯೇ ಧಾಳಿಗೆ ಮುಂದಾಗಿದ್ದು, ಅದೃಷ್ಟವಶಾತ್ ಸಿಬ್ಬಂದಿಗಳು ರಸ್ತೆ -ತೋಟದೊಳಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆರ್‌ಎಫ್‌ಓ ಚೇತನ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ತೋಟದಿಂದ ರಸ್ತೆಗೆ ಬಂದ ಕಾಡಾನೆ ಎಸ್ಟೇಟ್‌ನ ಗೇಟನ್ನು ಮುರಿದು, ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆರ್‌ಆರ್‌ಟಿ ಸಿಬ್ಬಂದಿ ದರ್ಶನ್ ಅವರಿಗೆ ಸೇರಿದ ಬೈಕ್‌ನ್ನು ಒದ್ದು ಜಖಂಗೊಳಿಸಿದೆ. ಟಾಟಾ ಕಾಫಿ ಎಸ್ಟೇಟ್ ಸುತ್ತಲೂ ಸಂಸ್ಥೆಯವರು ಸೋಲಾರ್ ಬೇಲಿ ನಿರ್ಮಿಸಿದ್ದು, ಅರಣ್ಯ ಪ್ರದೇಶದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಲಾಗಿದೆ.

ಹೀಗಾಗಿ ಕಾಡಾನೆಗಳ ಓಡಾಟಕ್ಕೆ ಸಂಚಕಾರವಾಗಿದ್ದು, ರೈಲ್ವೇ ಬ್ಯಾರಿಕೇಡ್ ಅಳವಡಿಸದೇ ಇರುವ ಜಾಗದಿಂದ ತೋಟಕ್ಕೆ ನುಗ್ಗುತ್ತಿವೆ. ಕೆಲವೊಮ್ಮೆ ತೋಟದಲ್ಲಿಯೇ ಹಲವು ದಿನಗಳವರೆಗೆ ಬೀಡುಬಿಡುವ ಕಾಡಾನೆಗಳು, ಕೃಷಿ ಯನ್ನು ನಷ್ಟಗೊಳಿಸುತ್ತಿವೆ. ಸ್ಥಳೀಯರಲ್ಲಿ ಜೀವ ಭಯಕ್ಕೆ ಕಾರಣವಾಗಿವೆ.

ಸೋಮವಾರಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿರುವ ಕಾಜೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಓಡಾಟ ನಿರಂತರವಾಗಿವೆ. ಅನೇಕ ಬಾರಿ ಈ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಆನೆ ಧಾಳಿ ನಡೆದಿದೆ. ಆದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಇದೀಗ ಆರ್‌ಆರ್‌ಟಿ ಸಿಬ್ಬಂದಿಗಳ ಮೇಲೂ ಧಾಳಿ ಯತ್ನ ನಡೆದಿದ್ದು, ಸ್ಥಳೀಯರು ಓಡಾಡಲೂ ಭಯಪಡುವಂತಾಗಿದೆ.