ಮಡಿಕೇರಿ, ಫೆ. ೧೦: ಸೇವಾ ಭಾರತಿ ಸೇವಾಧಾಮ ಸಂಸ್ಥೆಯು ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ, ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ, ಅಶ್ವಿನಿ ಆಸ್ಪತ್ರೆ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿ ಕುರ್ಚಿ ಜಾಥಾ ನಗರದಲ್ಲಿ ನಡೆಯಿತು.

ಜಾಥಾಕ್ಕೆ ನಗರ ಠಾಣಾ ಸಬ್‌ಇನ್ಸ್ಪೆಕ್ಟರ್‌ಗಳಾದ ಲೋಕೇಶ್ ಹಾಗೂ ತಮ್ಮಯ್ಯ ಚಾಲನೆ ನೀಡಿದರು.

ಆಸ್ಪತ್ರೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ರಾಣಿ ಮಾಚಯ್ಯ ಸಮಾರೋಪ ನುಡಿಗಳನ್ನಾಡಿದರು.

ಈ ವೇಳೆ ಮಾತನಾಡಿದ ಸೇವಾ ಭಾರತಿ ಸಂಸ್ಥೆಯ ಹಿರಿಯ ಸಂಯೋಜಕ ಆರ್. ಮನು ಕಳೆದ ೩ ದಿನಗಳಿಂದ ಮಡಿಕೇರಿಯಲ್ಲಿ ಅಪಘಾತಕ್ಕೆ ಒಳಗಾಗಿ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ೬ ಮಂದಿಗೆ ಗಾಲಿಕುರ್ಚಿ ವಿತರಿಸಲಾಯಿತು. ೧೦ ಮಂದಿಗೆ ಸೆಲ್ಫ್ ಕೇರ್ ಕಿಟ್, ೬ ಮಂದಿಗೆ ಒತ್ತಡ ಗಾಯಕ್ಕೆ ಚಿಕಿತ್ಸೆ ನೀಡುವ ಕಿಟ್‌ಗಳನ್ನು ವಿತರಿಸಲಾಯಿತು. ೭ ಮಂದಿ ನುರಿತ ವೈದ್ಯರಿಂದ ೧೪ ಮಂದಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಕೊಡಗು ಜಿಲ್ಲೆಯಲ್ಲಿ ಯಾರಾದರೂ ಅಪಘಾತದಿಂದ ಬೆನ್ನುಹುರಿ ಸಮಸ್ಯೆಗೆ ಸಿಲುಕಿದ್ದರೆ ಸಹಾಯಕ್ಕಾಗಿ ಸಂಪರ್ಕಿಸಬಹುದು ಎಂದು ತಮ್ಮ ಮೊಬೈಲ್ ಸಂಖ್ಯೆ ೯೬೦೬೦೪೪೮೯೩ಯನ್ನು ನೀಡಿದರು.

ಸೇವಾ ಭಾರತಿಯ ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ವಿಕಾಸ್ ಜನಸೇವಾ ಟ್ರಸ್ಟ್ ಖಜಾಂಚಿ ಬಿ.ಕೆ. ನವೀನ್, ಅಶ್ವಿನಿ ಆಸ್ಪತ್ರೆಯ ವ್ಯವಸ್ಥಾಪಕರಾದ ರವೀಂದ್ರ ಕುಮಾರ್ ಇತರರು ಭಾಗವಹಿಸಿದ್ದರು.