ಮಡಿಕೇರಿ, ಫೆ. ೧೦: ಮಡಿಕೇರಿ ಕೊಡಗು ವಿದ್ಯಾಲಯ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗೋಲ್ಡನ್ ಸಾರ್ಜೆಂಟ್ ರಘುವಂಶಿ. ಸಿ.ಎಸ್, ಅವರು ಜನವರಿ ೨೦೨೪ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿ ಇವರಿಗೆ ಶಾಲಾ ವತಿಯಿಂದ ಸ್ವಾಗತ ಕೋರಲಾಯಿತು.

ಪ್ರತಿಷ್ಠಿತ ಡೈರೆಕ್ಟರ್ ಜನರಲ್ ಮೆಡಲ್ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಕಾರ್ಡ್ ಅನ್ನು ಗಳಿಸಿದ್ದಾರೆ. ಇವರು ರಕ್ಷಣಾ ಸಚಿವ, ಚೀಫ್ ಆಫ್ ನಾವೆಲ್ ಸ್ಟಾಫ್, ಅಡಿಷನಲ್ ಡೈರೆಕ್ಟರ್ ಜನರಲ್ ಎನ್‌ಸಿಸಿ ಮುಂತಾದವರಿಗೆ ಫ್ಲ್ಯಾಗ್ ಏರಿಯಾ ಬ್ರೀಫಿಂಗ್ ಹಾಗೂ ಇನೋವೇಟಿವ್ ಸೈನ್ಸ್ ಬ್ರೀಫಿಂಗ್ ಮಾಡಿರುವ ಹೆಗ್ಗಳಿಕೆ ಇವರದ್ದು. ಇದಲ್ಲದೆ ಇವರು ಸಂಸದ್ ಟಿವಿ, ನ್ಯಾಷನಲ್ ಡಿಡಿ ಮತ್ತು ಚಂದನ ಟಿವಿ ಚಾನಲ್‌ಗಳಲ್ಲಿ ತಮ್ಮ ಸಾಧನೆಯ ಕುರಿತಾಗಿ ಸಂದರ್ಶನ ನೀಡಿರುವುದು ಹೆಮ್ಮೆಯ ವಿಷಯ. ದೆಹಲಿಗೆ ಹೋಗುವ ಮೊದಲು ಹಲವು ಶಿಬಿರಗಳಲ್ಲಿ ಭಾಗವಹಿಸಿ ಕರ್ನಾಟಕ - ಗೋವಾ ಡೈರೆಕ್ಟರೇಟ್ ನ ಬೆಸ್ಟ್ ಕೆಡೆಟ್ ಆಗಿ ಹೊರಹೊಮ್ಮಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ಗೆ ಆಯ್ಕೆಯಾಗಿದ್ದರು. ಇವರು ೧೯ ನೇ ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಯ ಕೆಡೆಟ್ ಆಗಿದ್ದು, ಕೊಡಗು ವಿದ್ಯಾಲಯ ಶಾಲೆಯ ಎನ್. ಸಿ. ಸಿ. ಆಫೀಸರ್ ಮೇಜರ್ ದಾಮೋದರ್ ಅವರ ಪ್ರೋತ್ಸಾಹ ಹಾಗೂ ತರಬೇತಿಯಿಂದ ಈ ಸಾಧನೆಯನ್ನು ಮಾಡಿದ್ದಾರೆ.

ಈ ಸಾಧನೆಗೈದ ಕೊಡಗು ವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಯನ್ನು ಶಾಲಾ ವತಿಯಿಂದ ಬ್ಯಾಂಡ್ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪೋಷಕರಾದ ಶಿವಕುಮಾರ್ ಹಾಗೂ ಸಂದ್ಯಾ ದಂಪತಿಯರ ಸಮ್ಮುಖದಲ್ಲಿ ಶಾಲಾ ಪ್ರಾಂಶುಪಾಲೆ ಕೆ.ಎಸ್ ಸುಮಿತ್ರಾ ಹಾಗೂ ಆಡಳಿತ ವ್ಯವಸ್ಥಾಪಕ ರವಿ. ಪಿ, ಕಮಾಂಡರ್ ಕರ್ನಲ್ ಜೆಫ್ರಿನ್ ಅರೆನಾ, ಸುಬೇದಾರ್ ಮೇಜರ್ ಸಿಜು ಹಾಗೂ ಮೇಜರ್ ದಾಮೋದರ್ ಅವರು ಸಾರ್ಜೆಂಟ್ ರಘುವಂಶಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ - ಶಿಕ್ಷಕೇತರ ವರ್ಗದವರು ಪಾಲ್ಗೊಂಡಿದ್ದರು.