ಸಿದ್ದಾಪುರ, ಫೆ. ೧೦: ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರನ್ನು ಜೀತದಾಳನ್ನಾಗಿ ಇರಿಸಿದ ಆರೋಪದ ಮೇಲೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅವರ ಮೇಲೆ ಪ್ರಕರಣ ದಾಖಲಾಗಿದೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಗೆ ಸೇರಿದ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿ ಹಾಗೂ ಮಾಜಿ ಜಿ .ಪಂ ಸದಸ್ಯ ಮೂಕೊಂಡ ವಿಜು ಸುಬ್ರಮಣಿಯವರ ತೋಟದ ಲೈನ್ ಮನೆಯಲ್ಲಿ ಪಣಿಯರ ಕೃಂದ (೫೫)ಹಾಗೂ ಮುತ್ತಿ (೫೦) ಎಂಬುವರು ಕುಟ್ಟ ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ತೆರಳಿ ತಮ್ಮನ್ನು ವಿಜು ಸುಬ್ರಮಣಿ ಜೀತದಾಳನ್ನಾಗಿ ಬಳಸುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿಗಳ ಬಳಿ ಮೌಖಿಕವಾಗಿ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಉಪ ವಿಭಾಗಾಧಿಕಾರಿಯವರ ಆದೇಶದಂತೆ ದೂರು ನೀಡಿದ ಕಾರ್ಮಿಕರನ್ನು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಕಾರ್ಮಿಕರನ್ನು ವಿಜು ಸುಬ್ರಮಣಿ ಜೀತದಾಳಾಗಿ ಇರಿಸಿಕೊಂಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ೧೯೭೬ ರ ಕರ್ನಾಟಕ ಕಾರ್ಮಿಕ ಪದ್ಧತಿ ವಿಮುಕ್ತಿ ಕಾಯ್ದೆ ಹಾಗೂ ಇನ್ನಿತರ ಕಾಯ್ದೆಯ ಅಡಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.