ಮಡಿಕೇರಿ, ಫೆ. ೧೦: ರಾಜ್ಯದಾದ್ಯಂತ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಪೌರ ಚಾಲಕರು, ನೀರುಗುಂಟಿಗಳು, ಲೋಡರ್ಸ್, ಕ್ಲೀನರ್ಸ್ ಸೇರಿದಂತೆ ಎಲ್ಲರನ್ನೂ ನೇರ ಪಾವತಿಗೆ ಅಳವಡಿಸುವದು ಹಾಗೂ ಪೌರ ಕಾರ್ಮಿಕರ ಬಾಕಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಕಾರ್ಮಿಕರು ತಾ.೧೩ ರಿಂದ ೧೫ ರವರೆಗೆ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈರಪ್ಪ ಶೆಟ್ಟಿ, ರಾಜ್ಯದಲ್ಲಿ ಒಟ್ಟು ೧೭೦೦ರಷ್ಟು ಹಾಗೂ ಕೊಡಗು ಜಿಲ್ಲೆಯಲ್ಲಿ ೧೭೦ರಷ್ಟು ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಈ ಬಗ್ಗೆ ಕಳೆದ ೧೫-೨೦ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿದ್ದರೂ ಇದುವರೆಗೂ ಯಾವದೇ ಸರಕಾರಗಳು ಸ್ಪಂದಿಸಿಲ್ಲ. ಹಾಗಾಗಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ತಾ.೧೩ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವದು. ತಾ.೧೪ರಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕೂ ಸರಕಾರ ಸ್ಪಂದಿಸದಿದ್ದರೆ, ತಾ.೧೫ರಂದು ಎಲ್ಲರೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಮಾವೇಶಗೊಂಡು ಅಲ್ಲಿಂದ ನಮ್ಮ ನಡಿಗೆ ಮುಖ್ಯಮಂತ್ರಿಗಳ ಕಡೆಗೆ ಎಂಬ ಘೋಷಣೆಯೊಂದಿಗೆ ಮುಖ್ಯಮಂತ್ರಿಗಳ ಮನೆಗೆ ತೆರಳಲಿರುವದಾಗಿ ತಿಳಿಸಿದರು. ಈ ಮೂರು ದಿನಗಳ ಕಾಲ ಸ್ವಚ್ಛತೆ ಸೇರಿದಂತೆ ಕುಡಿಯುವ ನೀರಿನ ಸರಬರಾಜು ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವದು. ಸಾರ್ವಜನಿಕರು ಸಹಕರಿಸಬೇಕು, ಗುತ್ತಿಗೆದಾರರಿಂದ ಸರಿಯಾದ ರೀತಿಯಲ್ಲಿ ವೇತನ ದೊರಕುತ್ತಿಲ್ಲ. ಕಾರ್ಮಿಕರ ಸಂಕಷ್ಟದ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಮೇಶ್ ಕುಟ್ಟಪ್ಪ, ಸೋಮವಾರಪೇಟೆಯ ನೀರು ಸರಬರಾಜು ವಿಭಾಗದ ಶಿವಪ್ರಕಾಶ್, ಕೃಷ್ಣ, ಮನೋಜ್‌ಕುಮಾರ್, ವೀರಾಜಪೇಟೆಯ ಹೇಮಂತ್‌ಕುಮಾರ್ ಇದ್ದರು.