ವೀರಾಜಪೇಟೆ, ಫೆ. ೧೦: ಸುಮಾರು ೬೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ನೂತನ ಪಂಚಾಯಿತಿ ಕಾರ್ಯಾಲಯ ಮತ್ತು ಸಭಾಂಗಣ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗ್ರಾಮ ಪಂಚಾಯಿತಿಯೇ ಬುನಾದಿ. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಕಟ್ಟಡ ಕಾಮಗಾರಿ ಅತಿ ಶೀಘ್ರವಾಗಿ, ಉತ್ತಮ ಗುಣಮಟ್ಟದಿಂದ ಪೂರ್ಣಗೊಳ್ಳಲಿ. ಇದೊಂದು ಮಾದರಿ ಪಂಚಾಯಿತಿಯಾಗಿ ರೂಪುಗೊಳ್ಳಲಿ ಇಲ್ಲಿನ ನಾಗರಿಕರಿಗೆ ಪಂಚಾಯಿತಿಯಿAದ ಎಲ್ಲಾ ಸೇವೆಗಳು ಸಕಾಲಕ್ಕೆ ಲಭ್ಯವಾಗುವಂತಾಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಗ್ರಾಮ ಅಭಿವೃದ್ಧಿ ಆದರೆ ಇಡೀ ದೇಶವೇ ಅಭಿವೃದ್ಧಿ ಆಗಲಿದೆ. ಕೇಂದ್ರ ಸರಕಾರವು ಗ್ರಾಮಾಭಿವೃದ್ಧಿ ಮಾಡುವ ಚಿಂತನೆಯಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡಕ್ಕೆ ಅನುದಾನ ನೀಡುತ್ತಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಎಂಎಲ್‌ಸಿ ಅನುದಾನದಲ್ಲಿ ೫ ಲಕ್ಷ ರೂ. ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ, ಕಟ್ಟಡ ನಿರ್ಮಾಣ ಮಾಡಲು ಸ್ಥಳದ ಹುಡುಕಾಟದಲ್ಲಿದ್ದೆವು. ಸೂಕ್ತ ಸ್ಥಳ ಲಭಿಸಿರಲಿಲ್ಲ. ಇಬ್ಬರು ಸ್ಥಳ ದಾನಿಗಳ ಸಹಾಯದಿಂದ ಕಟ್ಟಡಕ್ಕೆ ಸ್ಥಳ ಒದಗಿ ಇಂದು ಭೂಮಿ ಪೂಜೆ ನಡೆದಿದೆ ಎಂದರು. ಸ್ಥಳ ನೀಡಿದ ಚೇತನ್ ಹಾಗೂ ದಿನು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸು, ಸದಸ್ಯ ನಾಯಡ ಬೋಪಣ್ಣ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು.

ಈ ಸಂದರ್ಭ ಪಂಚಾಯಿತಿಯಲ್ಲಿ ನೂತನ ಕಟ್ಟಡ ಕಾಮಗಾರಿ ನಿರ್ವಹಿಸಲು ಗ್ರಾಮದ ಪ್ರತಿ ಮನೆಯಿಂದ ಒಂದು ಇಟ್ಟಿಗೆ ನೀಡಿ ಈ ಕಟ್ಟಡಕ್ಕೆ ಸಹಾಯ ಮಾಡುವಂತೆ ಸಂಕಲ್ಪ ಮಾಡಿರುವುದಾಗಿ ಪಿಡಿಓ ವಿಶ್ವನಾಥ್ ಮನವಿ ಮಾಡಿದರು. ನೂತನ ಕಟ್ಟಡ ನಿರ್ಮಾಣ ಮಾಡಲು ಸುಮಾರು ಹದಿನೆಂಟು ಸೆಂಟ್ ಜಾಗವನ್ನು ಉಚಿತವಾಗಿ ನೀಡಿದ ನೇಚರ್ ಪ್ಯಾರಡೈಸ್ ಸಂಸ್ಥೆಯ ಮುಖ್ಯಸ್ಥರಾದ ಚೇತನ್ ಮತ್ತು ಅಪ್ಪಂಡೇರAಡ ದಿನು ಅವರ ಕಾರ್ಯವನ್ನು ಶಾಸಕರು ಶ್ಲಾಘಿಸಿದರು. ಈ ಸಂದರ್ಭ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಚುನಾಯಿತ ಸದಸ್ಯರುಗಳು ಸೇರಿದಂತೆ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.