ಗೋಣಿಕೊಪ್ಪಲು, ಫೆ. ೧೦: ಸುಂದರ ಪರಿಸರದ ನಡುವೆ ನೆಲೆ ನಿಂತಿರುವ ಕೊಡಗಿನ ಕುಗ್ರಾಮ ಗಳಲ್ಲೊಂದಾಗಿರುವ ಬೆಟ್ಟತ್ತೂರು ದೇವಾಲಯಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಾಲ್ನಡಿಗೆಯಲ್ಲಿ ತೆರಳುವ ಮೂಲಕ ಚುನಾವಣ ಸಂದರ್ಭ ನೀಡಿದ್ದ ಮಾತಿನಂತೆ ದೇವಾಲಯದ ಆವರಣದ ತಡೆಗೋಡೆ ನಿರ್ಮಾಣಕ್ಕೆ ೫೦ ಲಕ್ಷ ಅನುದಾನವನ್ನು ನೀಡಿದರು.

ಬೆಟ್ಟತ್ತೂರು ಸುಬ್ರಹ್ಮಣ್ಯ ದೇವಾಲಯದ ಕುಸಿದು ಬಿದ್ದಿರುವ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಮುಖ್ಯ ರಸ್ತೆಯಿಂದ ದೇವಾಲಯ ಕ್ಕೆ ಕಾಲ್ನಡಿಗೆಯಲ್ಲಿಯೇ ತೆರಳಿದ ಪೊನ್ನಣ್ಣ ಗ್ರಾಮಸ್ಥರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದರು. ಶಾಸಕರನ್ನು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಗ್ರಾಮಸ್ಥರು ತಮ್ಮ ಹಲವು ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಮುಖ್ಯ ರಸ್ತೆಯ ೬ ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು ಆದ್ಯತೆ ಮೇರೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ, ರಜಾ ದಿನದಲ್ಲಿ ಸರ್ಕಾರಿ ಬಸ್ ಬಾರದೆ ಇರುವ ಬಗ್ಗೆ ಗ್ರಾಮದ ಹಿರಿಯರು ಶಾಸಕರ ಬಳಿ ಮನವಿ ಸಲ್ಲಿಸಿದರು.

ಗ್ರಾಮಸ್ಥರನ್ನು ಉದ್ದೇಶಿಸಿ, ಅಹವಾಲು ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ ಈಗಾಗಲೇ ಸರ್ಕಾರದ ವತಿಯಿಂದ ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ೧೭ ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಮುಂದಿನ ಅವಧಿ ಯಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದ್ದು ರಸ್ತೆ ಅಭಿವೃದ್ಧಿಯ ಬಗ್ಗೆ ಕ್ರಮಕೈಗೊಳ್ಳುತ್ತೇನೆ. ರಜಾ ದಿನಗಳಲ್ಲಿ ಬಸ್ ಸಂಚಾರ ಇಲ್ಲದ ಬಗ್ಗೆ ಸ್ಥಳದಿಂದ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಾರದ ಎಲ್ಲಾ ದಿನಗಳಲ್ಲೂ ಬಸ್ ಸಂಚಾರ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುಬ್ರಹ್ಮಣ್ಯ ದೇವಾಲಯಕ್ಕೆ ತಡೆಗೋಡೆ ನಿರ್ಮಾಣದೊಂದಿಗೆ ಉತ್ತಮವಾದ ಮೆಟ್ಟಿಲುಗಳ ನಿರ್ಮಾಣವನ್ನು ಕೂಡ ಕಾಮಗಾರಿ ಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ನೋಡಿಕೊಳ್ಳುವಂತೆ ಗ್ರಾಮದ ಹಿರಿಯರಿಗೆ ತಿಳಿಸಿದರು. ಕಾಮಗಾರಿ ಯನ್ನು ಆದಷ್ಟು ಬೇಗನೆ ಮುಕ್ತಾಯ ಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿ ಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಸದಸ್ಯರಾದ ಕೇಟೋಳಿ ಮೋಹನ್‌ರಾಜ್, ತುಳಸಿ ಗಾಂಧಿಪ್ರಸಾದ್ ಬಂಗಾರ್‌ಕೋಡಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕುಮಾರಸ್ವಾಮಿ, ಗುತ್ತಿಗೆದಾರ ಸಂತೋಷ್ ಹಾಗೂ ಇನ್ನಿತರರು ಹಾಜರಿದ್ದರು.