ವೀರಾಜಪೇಟೆ, ಫೆ. ೧೦: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕೂಡ ಪ್ರತಿಭ್ವಾನಿತರಾಗಿದ್ದು ಅನೇಕರು ಉನ್ನತ ಹುದ್ದೆಗೇರಿದ್ದಾರೆ. ಆದರಿಂದ ಸರ್ಕಾರಿ ಶಾಲೆ ಎಂಬ ಕೀಳರಿಮೆ ತೊರೆದು ಇಲ್ಲಿನ ಮಕ್ಕಳು ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮುಕ್ಕಾಟಿರ ಡಾ. ಎನ್. ರಮೇಶ್ ಹೇಳಿದರು.
ಅಮ್ಮತ್ತಿ-ಒಂಟಿಯAಗಡಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ಇಂದು ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಬಡ ಮಕ್ಕಳಿಗೂ ಶಿಕ್ಷಣ ಲಭಿಸಿ ಅವರು ಕೂಡ ಸಮಾಜದ ಮುಖ್ಯವಾಹಿನಿಗೆ ಬರುವಂತಾಗುತ್ತದೆ. ಇಂದಿನ ತಾಂತ್ರಿಕ ಯುಗದಲ್ಲಿ ಅಗತ್ಯ ಶಿಕ್ಷಣ ಮತ್ತು ಜ್ಞಾನ ಇರದೆ ಹೋದರೆ ತನ್ನ ಬದುಕಿನ ನಿತ್ಯದ ಕೆಲಸಗಳಿಗೂ ಸಮಸ್ಯೆಯಾಗುತ್ತದೆ. ಆದರಿಂದ ಮಕ್ಕಳು ತಮ್ಮ ಪೋಷಕರ ಅಭಿಲಾಷೆಯನ್ನು ಅರಿತು ಅವರ ಆಶಯಕ್ಕೆ ಬೆಲೆ ನೀಡಿ ಜ್ಞಾನಾರ್ಜನೆ ಮಾಡಿ ತಮ್ಮದೆ ಬದುಕು ರೂಪಿಸಿಕೊಂಡು ಯಾರಿಗೂ ಹೊರೆಯಾಗದಿರಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಕರ್ನಲ್ ಕಡ್ರತಂಡ ಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಮುಖ್ಯವಾಗಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಶಿಸ್ತು ಬದುಕಿನಲ್ಲಿ ಉತ್ತಮ ಪಾಠ ಕಲಿಸುತ್ತದೆ. ಅಲ್ಲದೆ ಉತ್ತಮ ಬದುಕು ರೂಪಿಸಲು ಸಹಕಾರಿಯಾಗುತ್ತದೆ. ಎಷ್ಟೆ ಶಿಕ್ಷಣ ಕಲಿತರು ಶಿಸ್ತು, ಶ್ರದ್ದೆ ಉತ್ತಮ ನಡವಳಿಕೆ ಎಲ್ಲರು ಹೊಂದಿರಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಬಗ್ಗೆ ಹಾಗೂ ನಮ್ಮ ದೇಶದ ಹೆಮ್ಮೆಯ ಸೇನೆಯ ಬಗ್ಗೆ ನಮ್ಮ ಸಂವಿಧಾನದ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಅರಿವು ಮೂಡಿಸಬೇಕು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉತ್ತಮ ಅರಿವು ನೀಡಿ ಉತ್ತಮ ಪ್ರಜೆಯಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷೆ ರಾಜೇಶ್ವರಿ ವಹಿಸಿದ್ದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೆ.ಪಿ. ನಾಗರಾಜು, ಸದಸ್ಯರಾದ ತಿಮ್ಮಯ್ಯ, ಆನಂದ್, ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ನಿವೃತ್ತ ಶಿಕ್ಷಕರಾದ ಎ.ಕೆ. ಮುದ್ದಪ್ಪರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಕೆ.ಪಿ. ಮಂಜುನಾಥ್ ಸ್ವಾಗತಿಸಿದರು. ಎ.ಎನ್ ಶೋಭ ವಂದಿಸಿದರು. ಶಿಕ್ಷಕಿ ಲೀಲಾವತಿ ಹಾಗೂ ರಬೀನಾ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಓ.ಆರ್. ಮಿನ್ನಮ್ಮ ಶಾಲಾ ವಾರ್ಷಿಕ ವರದಿ ವಾಚಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.