ಮಡಿಕೇರಿ, ಫೆ. ೧೧: ಮಡಿಕೇರಿ ನಗರದ ಚೈನ್‌ಗೇಟ್ ಬಳಿ ಶುಕ್ರವಾರ ನಡೆದಿದ್ದ ರಸ್ತೆ ಅವಘಡದಲ್ಲಿ ಗಾಯ ಗೊಂಡಿದ್ದ ಯುವಕ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಯೋರ್ವರು ಇಂದು ಮೃತ ಪಟ್ಟಿದ್ದಾರೆ. ಈ ಅಪಘಾತಕ್ಕೆ ಕಾರಣರಾಗಿದ್ದ ಮತ್ತೊಬ್ಬ ವ್ಯಕ್ತಿ. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ನಡೆದಿದೆ.
ಹಾಲೇರಿ ಕಾಂಡನ ಕೊಲ್ಲಿಯ ಅಯ್ಯಕುಟ್ಟೀರ ಜಯ ಗಣಪತಿ ಅವರ ಪುತ್ರ ಧನಲ್ ಸುಬ್ಬಯ್ಯ (೨೪) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಶುಕ್ರವಾರ ಅಪರಾಹ್ನ ನಗರದ ಚೈನ್‌ಗೇಟ್ ಬಳಿ ಧನಲ್ ಸುಬ್ಬಯ್ಯ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗೌಡ ಬೋರ್ಡಿಂಗ್ ಕಡೆಯ ರಸ್ತೆಯಿಂದ ಹೆರವನಾಡಿನ ಪನ್ಸ ಕಾಲೋನಿ ನಿವಾಸಿ ಹೆಚ್.ಡಿ. ತಮ್ಮಯ್ಯ (೫೭) ಚಲಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಈ ಸಂದರ್ಭ ಧನಲ್ ರಸ್ತೆಗೆ ಬಿದ್ದಿದ್ದು, ಇದೇ ರಸ್ತೆಯಲ್ಲಿ ಬಂದ ಲಾರಿಯೊಂದು ಸಣ್ಣ ಪ್ರಮಾಣದಲ್ಲಿ ರಸ್ತೆಗೆ ಬಿದ್ದದ್ದ ಯುವಕನಿಗೆ ತಾಗಿತ್ತೆನ್ನಲಾಗಿದೆ. ಆದರೆ ಸ್ಕೂಟರ್ ಡಿಕ್ಕಿಯಾಗಿದ್ದೇ ಯುವಕ ಗಂಭೀರಗೊಳ್ಳಲು ಕಾರಣ ಎನ್ನಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಯುವಕನನ್ನು ಮೆದುಳು ನಿಷ್ಕಿçಯಗೊಂಡಿದ್ದ ಹಿನ್ನೆಲೆ ಉಳಿಸಿಕೊಳ್ಳಲು ಸಾಧ್ಯವಾಗದು ಎಂಬ ವೈದ್ಯರ ಸಲಹೆ ಮೇರೆಗೆ ಮತ್ತೆ ಮಡಿಕೇರಿಗೆ ಕರೆತಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಯುವಕ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ತಮ್ಮಯ್ಯ ನೇಣಿಗೆ ಶರಣು
ಧನಲ್ ತಮ್ಮಯ್ಯ ಅವರನ್ನು ಘಟನೆ ಸಂದರ್ಭ ಆಸ್ಪತ್ರೆಗೆ ದಾಖಲಿಸಿ ತೆರಳಿದ್ದ ಹೆರವನಾಡುವಿನ ತಮ್ಮಯ್ಯ ಅವರು ತಮ್ಮಿಂದಾಗಿ ಘಟಿಸಿದ ತಪ್ಪಿಗೆ ಮನನೊಂದಿದ್ದರೆನ್ನಲಾಗಿದೆ. ಯುವಕನ ಪರಿಸ್ಥಿತಿಯ ಬಗ್ಗೆ ಮಾಹಿತಿ ದೊರೆತಿದ್ದು, ಇವರು ಮತ್ತಷ್ಟು ಅಘಾತಗೊಂಡಿದ್ದರೆನ್ನಲಾಗಿದೆ. ಈ ಕಾರಣದಿಂದಾಗಿ ಇವರು ಕೂಡ ಇಂದು ಮುಂಜಾನೆ ಹೆರವನಾಡಿನ ತಮ್ಮ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರು ವುದಾಗಿ ಹೇಳಲಾಗಿದೆ. ಅವಘಡ ದಿಂದ ಯುವಕ ಸಾವು ಹಾಗೂ ಇದಕ್ಕೆ ಕಾರಣರಾಗಿದ್ದ ವ್ಯಕ್ತಿಯ ಆತ್ಮಹತ್ಯೆ ಪ್ರಕರಣ ಒಂದು ರೀತಿಯಲ್ಲಿ ಅಚ್ಚರಿದಾಯಕ ಪ್ರಕರಣವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಅವಘಡದ ಬಗ್ಗೆ ನಗರ ಸಂಚಾರಿ ಠಾಣೆಯಲ್ಲಿ ಹಾಗೂ ಆತ್ಮಹತ್ಯೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.