ಮಡಿಕೇರಿ, ಫೆ. ೧೨: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಅಸಮಾಧಾನಿತ ಕಾರ್ಯಕರ್ತರು ಹಾಗೂ ಪ್ರಮುಖರ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸದಂತೆ ಕಾರ್ಯಕರ್ತರು ಹಾಗೂ ಪ್ರಮುಖರು ಒತ್ತಾಯಿಸಿದ್ದಾಗಿ ತಿಳಿದುಬಂದಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಸಮ್ಮುಖದಲ್ಲಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಕುಮಾರ್ ನೇತೃತ್ವದಲ್ಲಿ ಆಯೋಜನೆ ಗೊಂಡಿದ್ದ ಸಭೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಮಣೆ ಹಾಕಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನಾಮನಿರ್ದೇಶನ ಮಾಡುವ ವಿಚಾರದಲ್ಲಿ ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸುತ್ತಿಲ್ಲ. ನಾವು ಕಟ್ಟಿದ ಮನೆಯಲ್ಲಿ ಬೇರೆ ಯಾರೋ ಬಂದು ಅವಕಾಶ ಪಡೆಯುತ್ತಿದ್ದಾರೆ ಇದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ. ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಪಕ್ಷದಲ್ಲಿ ಅಧಿಕಾರ ನೀಡಿ; ಪಕ್ಷಕ್ಕಾಗಿ ಈ ಹಿಂದಿನಿAದಲೂ ದುಡಿದ ಹಿರಿಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಕೊಡಿ ಎಂಬ ಆಗ್ರಹದೊಂದಿಗೆ ಕ್ಷೇತ್ರದ ಶಾಸಕರು ಅಧಿಕಾರ ಹಂಚಿಕೆ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿ ಬಂದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ ಅವರ ಭೇಟಿ ಸಂದರ್ಭ ಹಿರಿಯ ಕಾರ್ಯಕರ್ತರುಗಳನ್ನು ಕಡೆಗಣಿಸ ಲಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಭೇಟಿ ಸಂದರ್ಭವೂ ಪಕ್ಷದ ಹಿರಿಯ ಸದಸ್ಯರನ್ನು ನಿರ್ಲಕ್ಷö್ಯ ಮಾಡಲಾಗಿದೆ ಎಂದು ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಅಸಮಾಧಾನಿತರ ಅಹವಾಲು ಗಳನ್ನು ಆಲಿಸಿದ ಧರ್ಮಜ ಉತ್ತಪ್ಪ, ಕಾರ್ಯಕರ್ತರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವ ಬಗ್ಗೆ ಬಲ್ಲಮೂಲಗಳಿಂದ ತಿಳಿದು ಬಂದಿದೆ. ಸಭೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಕೊಲ್ಯದ ಗಿರೀಶ್, ಟಾಟು ಮೊಣ್ಣಪ್ಪ, ಮುನೀರ್ ಅಹ್ಮದ್, ಹೆಚ್.ಎಂ. ನಂದಕುಮಾರ್, ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ಪ್ರಭುರೈ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ, ಮಾಜಿ ಸದಸ್ಯರಾದ ಅಬ್ದುಲ್ ರಜಾಕ್, ಪ್ರಕಾಶ್ ಆಚಾರ್ಯ, ಚುಮ್ಮಿ ದೇವಯ್ಯ, ಉದಯ ಕುಮಾರ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಪುಲಿಯಂಡ ಜಗದೀಶ್, ಜಿ.ಸಿ. ಜಗದೀಶ್, ಪಪ್ಪು ತಿಮ್ಮಯ್ಯ, ಕಟ್ರತನ ವೆಂಕಟೇಶ್, ಜಾನ್ಸನ್ ಪಿಂಟೊ ಮತ್ತಿತರರು ಪಾಲ್ಗೊಂಡಿದ್ದರು.