ಮಡಿಕೇರಿ, ಫೆ. ೧೪ : ಭಾರ ತೀಯ ಜನತಾ ಪಾರ್ಟಿ ವತಿಯಿಂದ ವೀರಾಜಪೇಟೆ ಶಾಸಕರಿಗೆ ಪ್ರಶ್ನಾಪತ್ರ ನೀಡಿರುವುದು ಬಿಜೆಪಿಯ ಪ್ರಚಾರದ ಗಿಮಿಕ್ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾಡಿರುವ ಆರೋಪ ಹಾಸ್ಯಾಸ್ಪದ ಎಂದು ಕೊಡಗು ಜಿಲ್ಲಾ ಬಿಜೆಪಿ ತಿರುಗೇಟು ನೀಡಿದೆ.

ನಗರದ ಪ್ರತಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ತಳೂರು ಕಿಶೋರ್‌ಕುಮಾರ್ ಮಾತನಾಡಿದರು. ಪಕ್ಷದ ಕಾರ್ಯಕ್ರಮದಡಿಯಲ್ಲಿ ಶಾಸಕರಿಗೆ ಪ್ರಶ್ನಾಪತ್ರ ನೀಡಲು ಮುಂದಾಗಿದ್ದು ಶಾಸಕರು ಸಿಗದ ಕಾರಣ ಅವರ ಕಚೇರಿಯಲ್ಲಿ ನೀಡಲಾಗಿತ್ತು. ಕೊಡಗಿನ ಹಾಲಿ ಶಾಸಕರು ಕೇವಲ ಕಾಂಗ್ರೆಸ್‌ನ ಶಾಸಕರಲ್ಲ; ಜಿಲ್ಲೆಯ ಎಲ್ಲಾ ಜನರಿಗೂ ಅವರು ಶಾಸಕರೆ. ಎಂ.ಎಲ್.ಎ. ಚುನಾವಣೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ.

ಹಿಂದಿನ ಶಾಸಕರುಗಳು ಮಾಡಿದ್ದ ಅಭಿವೃದ್ಧಿ ಕೆಲಸಗಳಿಗೆ ಗುದ್ದಲಿ ಪೂಜೆ ಮಾಡುವುದು, ಒಂದೇ ರಸ್ತೆಯನ್ನು ಎರಡು ಬಾರಿ ಉದ್ಘಾಟನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಹಿಂದಿನ ಬಿ.ಜೆ.ಪಿ.ಯ ಎರಡು ಶಾಸಕರುಗಳು ತಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ಶ್ವೇತ ಪತ್ರ ಹೊರಡಿಸಿದ್ದಾರೆ. ಆದರೆ ಈಗಿನ ಶಾಸಕರು ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ನಾವು ಪ್ರಶ್ನೆ ಮಾಡಿರುವುದು ತಪ್ಪೇ? ಎಂದು ಪ್ರತಿಕ್ರಿಯಿಸಿದ ಕಿಶೋರ್‌ಕುಮಾರ್ ಬಿ.ಜೆ.ಪಿ. ಎಂದಿಗೂ ದ್ವೇಷದ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ ವೀಣಾ ಅಚ್ಚಯ್ಯ ಅವರಿಗೆ ನೋವಾಗುವುದೇಕೆ ಎಂದು ಪ್ರಶ್ನಿಸಿದರು.

ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ.

ಬೆAಗಳೂರು ಮೈಸೂರು, ಮೈಸೂರು ಕುಶಾಲನಗರದ ಚತುಷ್ಪತ ರಸ್ತೆ, ಸಂಪಾಜೆ ಮಡಿಕೇರಿ ರಸ್ತೆ ಕಾಮಗಾರಿಗಳು ಕೇಂದ್ರ ಸರ್ಕಾರದ ಅನುದಾನದಿಂದ ನಡೆದಿವೆ. ಜಿಲ್ಲೆಯ ಹಲವಾರು ಸಹಕಾರ ಸಂಘಗಳ ಅಭಿವೃದ್ಧಿಗೆ, ಶಾಲಾ ಸಭಾಂಗಣಗಳಿಗೆ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಮುದಾಯ ಭವನಗಳಿಗೆ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಾಕಷ್ಟು ಅನುದಾನವನ್ನು ಸಂಸದರು ನೀಡಿದ್ದಾರೆ ಎಂದು ವಿವರಿಸಿದರು

ಮತ್ತೋರ್ವ ವಕ್ತಾರ ಬಿ.ಕೆ. ಅರುಣ್‌ಕುಮಾರ್ ಮಾತನಾಡಿ, ಬಿಜೆಪಿಯನ್ನು ಟೀಕೆ ಮಾಡುವ ವೀಣಾ ಅಚ್ಚಯ್ಯ ಅವರು, ಕಾಂಗ್ರೆಸ್ ಯಾವುದಕ್ಕೆ ಅನುದಾನ ಬಿಡುಗಡೆ ಮಾಡಿದೆ ಎಂಬುದನ್ನು ತಿಳಿಸಲಿ. ಭಾರತೀಯರ ಶ್ರಮದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ ಎನ್ನುತ್ತಾರೆ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಏಕೆ ಇದು ಸಾಧ್ಯವಾಗಲಿಲ್ಲ; ಕಾಂಗ್ರೆಸ್‌ನವರು ಭಾರತೀಯರಲ್ಲವೆ ಎಂದು ಪ್ರಶ್ನಿಸಿದರು. ವಕ್ತಾರ ಮಹೇಶ್ ಜೈನಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿಗೆ ಬಂದಿದ್ದಾಗ ಪದ್ಧತಿಯಂತೆ ನಗರದ ಪ್ರಥಮ ಪ್ರಜೆಯಾಗಿ ನಗರಸಭಾ ಅಧ್ಯಕ್ಷೆ ಹಾಗೂ ಸದಸ್ಯರು ಮುಖ್ಯಮಂತಿಗಳನ್ನು ಸನ್ಮಾನ ಮಾಡಲು ಮುಂದಾಗಿದ್ದರು. ಇದನ್ನು ಕೂಡ ಟೀಕಿಸುವ ವೀಣಾಅಚ್ಚಯ್ಯ ಅವರ ರಾಜಕೀಯ ಮನಸ್ಥಿತಿ ಎಂಥದ್ದು ಎಂದು ಪ್ರಶ್ನಿಸಿದರು. ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ ಕೊಡಗಿನಲ್ಲಿ ಬಿಜೆಪಿ ಶಾಸಕರಿದ್ದಾಗ ವೀಣಾಅಚ್ಚಯ್ಯ ಅವರು ಎಂಎಲ್‌ಸಿ ಆಗಿದ್ದರು. ಆಗ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಡೆದಿವೆ ಎಂಬ ಬಗ್ಗೆ ಅವರಿಗೆ ಅರಿವಿದ್ದರೂ ಕೂಡ ಬಿಜೆಪಿ ಶಾಸಕರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾ ಗಿಮಿಕ್ ಮಾಡುತ್ತಿರುವವರು ಅವರೇ ಹೊರತು ನಾವಲ್ಲ ಎಂದರು. ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಭೀಮಯ್ಯ ಉಪಸ್ಥಿತರಿದ್ದರು.