ಗೋಣಿಕೊಪ್ಪಲು, ಫೆ. ೧೩: ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿ ಕಾವೇರಿ ನದಿ ಸೇತುವೆ ಬಳಿ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ ದೊರೆಯಿತು.

ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಅವರ ಮುಂದಾಳತ್ವದಲ್ಲಿ ಜಾಥಾವನ್ನು ಬರಮಾಡಿ ಕೊಳ್ಳಲಾಯಿತು. ಬಾಬ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿದ ತಹಶೀಲ್ದಾರ್ ನಂತರ ಬಲೂನ್ ಹಾರಿಸುವ ಮೂಲಕ ಮೆರವಣಿಗೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಆರತಿ ಬೆಳಗಿದರು. ಜಿಲ್ಲಾ ಸಮಾಜ ಕಲ್ಯಾಣಧಿಕಾರಿಗಳಾದ ಶೇಖರ್ ಮೆರವಣಿಗೆ ಉದ್ಘಾಟಿಸಿದರು.

ಮೆರವಣಿಗೆಯಲ್ಲಿ ಕಲಶ ಹೊತ್ತ ಮಹಿಳೆಯರು, ಕಲಾ ತಂಡಗಳು, ಬೈಕ್‌ಗಳು, ಆಟೋ ರಿಕ್ಷಾಗಳು, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಗಮನ ಸೆಳೆಯಿತು.

ತಾಲೂಕು ಆಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಇಓ ಅಪ್ಪಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕಮಾದು, ಬಿಇಓ ಪ್ರಕಾಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ನದಿ ಸೇತುವೆಯ ಬಳಿಯಿಂದ ಹೊರಟ ರಥವು ಮಧ್ಯಾಹ್ನ ಸಿದ್ದಾಪುರ ಬಸ್ ನಿಲ್ದಾಣವನ್ನು ತಲುಪಿತು. ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಗ್ರಾ.ಪಂ. ಅಧ್ಯಕ್ಷೆ ಪ್ರೇಮ ಗೋಪಾಲ್ ಉದ್ಘಾಟಿಸಿದರು.

ಸಂವಿಧಾನ ಪೀಠಿಕೆಯನ್ನು ತಹಶೀಲ್ದಾರ್ ರಾಮಚಂದ್ರ ಓದಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವೀರಾಜಪೇಟೆಯ ಅರ್ಜುನ್ ಮೌರ್ಯ ಮಾತನಾಡಿ ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ನಾಗರಿಕ ನಡೆದು ಕೊಳ್ಳಬೇಕು, ಪ್ರಪಂಚದಲ್ಲಿಯೇ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳ ಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ವಿದ್ಯಾರ್ಥಿಗಳಿಂದ ಭಾಷಣ, ಗೀತೆ ಹಾಗೂ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು. ವೇದಿಕೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶೇಖರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರೀತಿ ಚಿಕ್ಕಮಾದು, ಇಒ ಕೆ.ಸಿ. ಅಪ್ಪಣ್ಣ, ಬಿಇಓ ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ, ಮಾಜಿ ಜಿ.ಪಂ. ಸದಸ್ಯ, ವೆಂಕಟೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಓ ಶಫೀಕ್ ಸ್ವಾಗತಿಸಿ, ಸದಸ್ಯ ಶುಕೂರ್ ನಿರೂಪಿಸಿ, ವಂದಿಸಿದರು. ನಂತರ ಸಂವಿಧಾನ ಜಾಗೃತಿ ಜಾಥಾವು ಮಾಲ್ದಾರೆ ಭಾಗಕ್ಕೆ ತೆರಳಿತು.