ಕೂಡಿಗೆ, ಫೆ. ೧೩: ಜಿಲ್ಲೆಯಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತು ಭೂಮಿಯ ಶೀತಾಂಶ ಕಡಿಮೆ ಇರುವುದರಿಂದಾಗಿ ಒಣ ಹವಾಮಾನಕ್ಕೆ ಅನುಗುಣವಾಗಿ ಸಿಹಿ ಗೆಣಸು ಬೆಳೆಯು ಉತ್ತಮವಾಗಿ ಬರುವುದರಿಂದ ಮತ್ತು ಬೆಲೆಯಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಈ ಸಾಲಿನಲ್ಲಿ ಹೆಚ್ಚು ಸಿಹಿ ಗೆಣಸು ಬೆಳೆಯನ್ನು ಬೆಳೆಯಲು ತೊಡಗಿದ್ದಾರೆ.

ವಾಣಿಜ್ಯ ಬೆಳೆಯ ಮಾದರಿಯಲ್ಲಿ ಸಿಹಿ ಗೆಣಸು ಬೆಳೆಯನ್ನು ನೀರಾವರಿ ಸೌಲಭ್ಯ ಹೊಂದಿರುವ ರೈತರು ವರ್ಷದಲ್ಲಿ ಎರಡು ಬೆಳೆಗಳನ್ನು ತೆಗೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಸಿಹಿ ಗೆಣಸಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯು ಸಹ ದೊರಕುತ್ತಿದೆ. ಆದ್ದರಿಂದ ಈ ಬಾರಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶುಂಠಿ ಬೆಳೆಯಷ್ಟೇ ಸಿಹಿ ಗೆಣಸು ಬೆಳೆಯನ್ನು ಬೆಳೆಯಲು ಭೂಮಿಯನ್ನು ಸಿದ್ಧತೆ ಮಾಡಿ ಅದಕ್ಕೆ ಬೇಕಾಗುವ ಸಾವಯವ ಗೊಬ್ಬರ ಮತ್ತು ಎಲೆಗಳ ಗೊಬ್ಬರ ಹಾಕಿ, ಜೊತೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಔಷಧೀಯ ಪುಡಿಯನ್ನು ಟ್ರಾö್ಯಕ್ಟರ್ ಮೂಲಕ ಉಳುಮೆ ಮಾಡುವ ಸಂದರ್ಭದಲ್ಲಿ ಹಾಕಿ ಬೇಸಾಯ ಮಾಡಲು ಸಿದ್ಧರಾಗಿದ್ದಾರೆ.

ಈ ಬಾರಿ ಶುಂಠಿ ಬೆಲೆ ಏರಿಕೆ ಆದಂತೆ ಸಿಹಿ ಗೆಣಸಿನ ಬೆಲೆಯೂ ಭಾರೀ ಏರಿಕೆ ಆಗಿದೆ. ಕಳೆದ ಸಾಲಿನಲ್ಲಿ ಸಿಹಿ ಗೆಣಸು ಒಂದು ಕೆ.ಜಿ. ೮.ರೂ ನಿಂದ ೧೦. ರೂ. ಇತ್ತು, ಆದರೆ ಈ ಬಾರಿ ೧೦ ರೂ. ನಿಂದ ೧೮ ರೂ. ವರೆಗೆ ಬೆಲೆ ಏರಿಕೆ ಆಗಿದೆ. ಸಿಹಿ ಗೆಣಸು ಬೆಳೆಯು ವರ್ಷದಲ್ಲಿ ಎರಡು ಬೆಳೆ ತೆಗೆಯುವುದರ ಜೊತೆಗೆ, ನಾಲ್ಕರಿಂದ ಐದು ತಿಂಗಳಲ್ಲಿ ಕೀಳಲೇಬೇಕಾಗುವುದು, ನಂತರ ಬಿಟ್ಟರೆ ರೋಗ ಭಾದೆ ಕಂಡುಬರುತ್ತದೆ. ಆದ್ದರಿಂದಾಗಿ ಸಿಹಿ ಗೆಣಸು ಬೆಳೆದ ರೈತರು ನಾಲ್ಕು ತಿಂಗಳಷ್ಟರಲ್ಲಿ ಬೆಳೆ ಕೀಳಲು ಆರಂಭ ಮಾಡುತ್ತಾರೆ. ಬೆಳೆಯು ಉತ್ತಮವಾಗಿ, ಕಡಿಮೆ ನೀರಾವರಿ ಸೌಲಭ್ಯದಲ್ಲಿ ಬರುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಇದರೊಂದಿಗೆ ಸಿಹಿ ಗೆಣಸು ಬೆಳೆಯನ್ನು ಬೆಳೆದು ಅದರ ಬಳ್ಳಿಯನ್ನು ರೈತರು ಹಸುಗಳಿಗೆ ಆಹಾರವಾಗಿ ಉಪಯೋಗಿಸುವುದ ರಿಂದಾಗಿ ಹೈನುಗಾರಿಕೆಗೂ ಸಹಕಾರ ವಾಗುತ್ತದೆ. ಇದರಿಂದಾಗಿ ಈ ವ್ಯಾಪ್ತಿಯ ರೈತರು ಸಿಹಿ ಗೆಣಸು ಬೇಸಾಯದಲ್ಲಿ ಹೆಚ್ಚಾಗಿ ತೊಡಗಿರುವುದು ಕಾಣಬಹುದಾಗಿದೆ.