ಗೋಣಿಕೊಪ್ಪಲು, ಫೆ. ೧೩ : ದ.ಕೊಡಗಿನ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘವು ೨೭೦೦ ಸದಸ್ಯರನ್ನು ಒಳಗೊಂಡಿದ್ದು ಸುತ್ತಮುತ್ತಲಿನ ಗ್ರಾಮದ ರೈತರಿಗೆ ಉತ್ತಮ ಸೇವೆಗಳನ್ನು ನೀಡುತ್ತ ಸಂಘವು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಘದ ಕೆಲ ಸದಸ್ಯರು ಸಂಘದ ಏಳಿಗೆಯನ್ನು ಸಹಿಸಲಾರದೆ ಸಂಘವನ್ನು ತೇಜೋವಧೆ ಮಾಡುತ್ತಿರುವುದು ಕಂಡು ಬಂದಿದೆ. ಇಂತಹವುಗಳಿಗೆ ಸಂಘದ ಸದಸ್ಯರು ಕಿವಿಗೊಡದಂತೆ ಸಂಘದ ಮಾಜಿ ಅಧ್ಯಕ್ಷರಾದ ಕೇಚೆಟ್ಟಿರ ಅರುಣ್ ತಿಳಿಸಿದ್ದಾರೆ. ಹುದಿಕೇರಿಯ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹಲವು ಮಾಹಿತಿಗಳನ್ನು ನೀಡಿದರು.

ಹಿರಿಯರು ಕಟ್ಟಿ ಬೆಳೆಸಿರುವ ಸಂಘದಲ್ಲಿ ಸದಸ್ಯರುಗಳು ಉತ್ತಮ ವಹಿವಾಟು ನಡೆಸುವ ಮೂಲಕ ಸಾಲ ಯೋಜನೆಗಳು ಸೇರಿದಂತೆ ಇನ್ನಿತರ ಪ್ರಯೋಜನಗಳನ್ನು ರೈತರು ಪಡೆಯುತ್ತಿದ್ದಾರೆ. ಸಂಘದ ಆಡಳಿತ ಮಂಡಳಿಯು ರೈತರ ಹಿತ ಕಾಪಾಡುತ್ತಿದೆ. ಆದರೆ ಆಧಾರ ರಹಿತವಾಗಿ ಸಂಘದ ಬೆಳವಣಿಗೆಯನ್ನು ಸಹಿಸಲಾರದ ಕೆಲವು ವ್ಯೆಕ್ತಿಗಳು ಸಂಘಕ್ಕೆ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತ ಸಮಯ ಕಳೆಯುತ್ತಿದ್ದಾರೆ. ಇದೀಗ ಸಂಘದಲ್ಲಿ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದೆ ಇರುವುದರಿಂದ ರೈತರಿಗೆ ಸಕಾಲದಲ್ಲಿ ಸಿಗುವ ಸಾಲ ಯೋಜನೆ ಹಾಗೂ ರೈತರಿಂದ ಸಂಘಕ್ಕೆ ಬರಬೇಕಾದ ಸಾಲದ ಹಣ ಸ್ವೀಕರಿಸಲು ಕಷ್ಟವಾಗುತ್ತಿವೆ.

ಸಂಘದ ಆಡಳಿತ ಮಂಡಳಿ ಅವಧಿಯು ೨೫.೧೦.೨೦೨೩ರಂದು ಮುಕ್ತಾಯಗೊಂಡಿರುತ್ತದೆ. ಇದಕ್ಕೆ ಪೂರಕವಾಗಿ ಆಡಳಿತ ಮಂಡಳಿ ಚುನಾವಣೆಯನ್ನು ಉಪನಿಬಂಧಕರು ೮.೧೦.೨೦೨೩ರಂದು ನಿಗಧಿಪಡಿಸಿ ಚುನಾವಣಾ ಅಧಿಕಾರಿಯನ್ನು ನೇಮಕಗೊಳಿಸಿದ್ದರು. ನಂತರ ಚುನಾವಣೆಯನ್ನು ೧೮.೧೦.೨೦೨೩ಕ್ಕೆ ಮುಂದೂಡಿದ್ದರು. ಮತದಾರರ ಪಟ್ಟಿಗೆ ಸಹಿ ಮಾಡದ ಹಿನ್ನೆಲೆಯಲ್ಲಿ ೨೧.೧೦.೨೦೨೩ ಆಡಳಿತ ಅಧಿಕಾರಿಯನ್ನು ನೇಮಕಗೊಳಿಸಿದ್ದರು.

ನೇಮಕಗೊಂಡ ಅಧಿಕಾರಿಯ ಅವಧಿಯು ೨೧.೧.೨೦೨೪ಕ್ಕೆ ಮುಕ್ತಾಯಗೊಂಡಿರುತ್ತದೆ. ಇದರ ಮಧ್ಯೆಯೇ ಚುನಾವಣಾ ದಿನಾಂಕವನ್ನು ೧೮.೨.೨೦೨೪ಕ್ಕೆ ನಿಗಧಿಪಡಿಸಿ ಚುನಾವಣಾ ಅಧಿಕಾರಿಯನ್ನು ನೇಮಕಗೊಳಿಸಿದ್ದರು. ಆದರೆ ಇಲ್ಲಿಯ ತನಕ ಆಡಳಿತ ಮಂಡಳಿಗೆ ಚುನಾವಣೆ ನಡೆದಿರುವುದಿಲ್ಲ. ಇದರಿಂದ ಸಂಘದ ಸದಸ್ಯರ ಬೇಕು ಬೇಡಿಕೆಗಳಿಗೆ ಸ್ಪಂಧಿಸಲು ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಆಡಳಿತ ಅಧಿಕಾರಿಯ ಅವಧಿಯೂ ಮುಗಿದಿರುತ್ತದೆ. ಇಲ್ಲಿಯ ತನಕ ಆಡಳಿತ ಅಧಿಕಾರಿಯಾಗಲಿ, ಚುನಾವಣೆಯಾಗಲಿ ನಡೆದಿರುವುದಿಲ್ಲ. ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸುವಂತೆ ಆಗ್ರಹಿಸಿ ಸಂಘದ ಸದಸ್ಯರು ಫೆ.೧೬ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಮಡಿಕೇರಿಯ ಉಪನಿಬಂಧಕರ ಕಚೇರಿಯ ಮುಂದೆ ನೂರಾರು ಸಂಘದ ಸದಸ್ಯರು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮಾಜಿ ಅಧ್ಯಕ್ಷರಾದ ಕೇಚೆಟ್ಟಿರ ಅರುಣ್ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಸೋಲನ್ನು ಕಂಡಿರುವ ಕೆಲವು ಅಭ್ಯರ್ಥಿಗಳು ದ್ವೇಷ ಸಾಧನೆಗೋಸ್ಕರ ಸಂಘದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅಧಿಕಾರಿಗಳ ಮೇಲೆ ಒತ್ತಡಗಳನ್ನು ಹಾಕಿ ಸಂಘದ ಚಟುವಟಿಕೆಗಳಿಗೆ ತೊಂದರೆ ನೀಡುತ್ತಿದ್ದಾರೆ. ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣನವರಿಗೆ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಸತ್ಯವನ್ನು ಮರೆಮಾಚಿ ಅಧಿಕಾರಿಗಳಿಗೆ ಚುನಾವಣೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ.

ಇವುಗಳಲ್ಲಿ ಸದಸ್ಯರುಗಳಾದ ಚಂಗುಲAಡ ಸೂರಜ್, ಮಿದೇರಿರ ನವೀನ್ ಹಾಗೂ ಅಜ್ಜಿಕುಟ್ಟಿರ ಕಾರ್ಯಪ್ಪ ಪ್ರಮುಖರಾಗಿದ್ದಾರೆ ಎಂದು ಆರೋಪ ಮಾಡಿದರು. ಈ ಹಿಂದೆಯು ಸಂಘದ ಮೇಲೆ ಆರೋಪ ಮಾಡಿದ್ದರು. ಭಾರತಿ ಎಂಬುವವರು ೩ ಸಂಸ್ಥೆಗಳಲ್ಲಿ ಸದಸ್ಯತನ ಹೊಂದಿದ್ದಾರೆ. ಆದ್ದರಿಂದ ನಿಯಮದಂತೆ ಇವರನ್ನು ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯರನ್ನಾಗಿ ಮಾಡಲು ಅವಕಾಶವಿರುವುದಿಲ್ಲ ಹಾಗಾಗಿ ಸಂಘದ ಸದಸ್ಯತನದಿಂದ ಕೈಬಿಡಲಾಗಿದೆ. ಎಂದು ಸ್ಪಷ್ಟಪಡಿಸಿದರು.

ಮಾಜಿ ಅಧ್ಯಕ್ಷರಾದ ಚೇಂದಿರ ರಘು ತಿಮ್ಮಯ್ಯ ಮಾತನಾಡಿ ಸಂಘದ ಆಡಳಿತ ಮಂಡಳಿಯ ಮೇಲೆ ವಿಶ್ವಾಸವಿಟ್ಟು ಸದಸ್ಯರು ನಮ್ಮನ್ನು ಆಯ್ಕೆ ಮಾಡಿದ್ದರು. ಸಂಘದ ಏಳಿಗೆಗಾಗಿ ಆಡಳಿತ ಮಂಡಳಿಯು ಶ್ರಮಿಸುವ ಮೂಲಕ ನಮ್ಮ ಸಂಘವು ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ಸಂಘದ ಸದಸ್ಯರಿಗೆ, ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಿದೆ. ಕಳೆದ ಸಾಲಿನಲ್ಲಿ ನಡೆದ ಆಡಳಿತ ಮಂಡಳಿ ಚುನಾವಣೆಯನ್ನು ಸ್ಪರ್ಧಿಸಿ ಸೋಲು ಅನುಭವಿಸಿರುವ ಚಂಗಲAಡ ಸೂರಜ್ ಈ ಬಾರಿಯು ಆಕಾಂಕ್ಷಿಗಳಾಗಿರುವುದು ತಿಳಿದು ಬಂದಿದೆ. ಇದರಿಂದ ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗವನ್ನು ಅನುಸರಿಸುತ್ತ ಸಂಘದ ಆಡಳಿತ ಮಂಡಳಿಯ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆರೋಪವು ಸತ್ಯಕ್ಕೆ ದೂರವಾಗಿರುತ್ತದೆ ಎಂದರು. ಹುದಿಕೇರಿಯ ಕೃಷಿ ಪತ್ತಿನ ಸಹಕಾರ ಸಂಘವು ರಸಗೊಬ್ಬರ ಕಂಪೆನಿಯಿAದ ನಿಂiÀiಮಾನುಸಾರ ಪರವಾನಿಗೆ ಪಡೆದು ವ್ಯಾಪಾರ ಮಾಡುತ್ತಿದೆ. ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿಯು ಸುಳ್ಳಾಗಿರುತ್ತದೆ.

ಹೊರ ಜಿಲ್ಲೆಗೆ ರಸಗೊಬ್ಬರ ಮಾರಾಟ ಮಾಡುವ ಸಂದರ್ಭ ಜಂಟಿ ಕೃಷಿ ನಿರ್ದೇಶಕರ ಅನುಮತಿ ಪಡೆಯಬೇಕೆಂಬ ಮಾಹಿತಿ ಕೊರತೆಯಿಂದ ಈ ಹಿಂದಿನ ಆಡಳಿತ ಮಂಡಳಿ ಅನುಮತಿ ಪಡೆದಿರಲಿಲ್ಲ. ಮುಂದೆ ರಸ ಗೊಬ್ಬರ ಮಾರಾಟ ಸಂದರ್ಭ ಅನುಮತಿ ಪಡೆಯಲಾಗುವುದು. ಸಂಘದ ಸದಸ್ಯರಿಗೆ ಯಾವುದೆ ಆಧಾರವಿಲ್ಲದೆ ಗೊಬ್ಬರವನ್ನು ವಿತರಿಸುವ ಅವಕಾಶವಿರುವುದಿಲ್ಲ. ಮತದಾರರ ಪಟ್ಟಿ ತಯಾರಿಕೆಯಲ್ಲಿ ಭ್ರಷ್ಟಚಾರ ನಡೆಸಿದ್ದಾರೆಂಬ ಆರೋಪವು ಆಧಾರರಹಿತವಾಗಿದೆ ಹೊರ ಜಿಲ್ಲೆಗೆ ರಸಗೊಬ್ಬರ ಮಾರಾಟದಲ್ಲಿ ಸಂಘಕ್ಕೆ ೬ ಲಕ್ಷ ಲಾಭಾಂಶ ಬಂದಿದ್ದು, ಆಡಿಟ್ ವರದಿಯನ್ನು ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂದು ಅವರು ಹೇಳಿದರು.

೨೦೧೯-೨೦ನೇ ಸಾಲಿನಲ್ಲಿ ೨೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ೨೦ ಲಕ್ಷ ಸಹಾಯಧನದಲ್ಲಿ ಆರ್‌ಎಂಸಿ ವತಿಯಿಂದ ಸರ್ಕಾರದ ನಿರ್ದೇಶನದಂತೆ ನಿರ್ಮಿಸಿ ಸಂಘದ ಸದಸ್ಯರ ಸೇವೆಗಾಗಿ ನೀಡಲಾಗಿದೆ. ಈ ಗೋದಾಮಿನಿಂದ ಸಂಘಕ್ಕೆ ಬಾಡಿಗೆ ಹಾಗೂ ಉತ್ತಮ ಆದಾಯ ಬರುತ್ತಿದೆ. ೨೦೨೧-೨೨ನೇ ಸಾಲಿನಲ್ಲಿ ಮಹಾಸಭೆಯಲ್ಲಿ ಅನುಮತಿ ಪಡೆದು ಕ್ರಮಬದ್ದವಾಗಿ ಟೆಂಡರ್ ತೆರೆದು ೬೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸಲಾಗಿದೆ. ಇದರಿಂದ ಮಾಸಿಕ ೩೦ ಸಾವಿರದಂತೆ ಸಂಘಕ್ಕೆ ೩.೬೦ ಲಕ್ಷ ಲಾಭ ಬಂದಿರುತ್ತದೆ. ಸಂಘದ ಸದಸ್ಯರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ಸೂರಜ್‌ರವರಿಂದ ನಡೆಯುತ್ತಿದೆ.

ಸಂಘದ ಮೇಲೆ ವ್ಯವಹಾರ ಜ್ಞಾನದ ಕೊರತೆಯಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಸಂಘದ ಏಳಿಗೆಗೆ ಕೈಜೋಡಿಸುವುದು ಒಳಿತು. ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣನವರು ಸಂಘದ ಹಿತದೃಷ್ಟಿಯಿಂದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಆಧಾರರಹಿತ ಆರೋಪ ಮಾಡುವವರಿಗೆ ಮನ್ನಣೆ ನೀಡಬಾರದೆಂದು ಈ ವೇಳೆ ತಿಳಿಸಿದರು. ಸಂಘದ ಹಿರಿಯ ಸದಸ್ಯರಾದ ಕುಪ್ಪಣಮಾಡ ಗಣೇಶ್‌ರವರು ಸಂಘದ ಏಳಿಗೆಗಾಗಿ ಸಾವಿರಾರು ಸದಸ್ಯರು ದುಡಿದಿದ್ದಾರೆ. ಇವರ ಸೇವೆ ಮನಗಂಡು ಅನಾವಶ್ಯಕ ಆರೋಪಗಳನ್ನು ಮಾಡದಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಚಂದ್ರ ಪ್ರಕಾಶ್, ಸಿ.ಡಿ.ತಿಮ್ಮಯ್ಯ, ಸಿ.ಬಿ.ನಂಜಪ್ಪ, ಕೆ.ಕೆ.ಮಂದಣ್ಣ, ಕೆ.ಎನ್.ಅಪ್ಪಣ್ಣ, ಬಿ.ಎನ್. ಸುನಿಲ್‌ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.