ಮಡಿಕೇರಿ, ಫೆ. ೧೩: ವಿಶಿಷ್ಟ ರುಚಿಯಿಂದ ವಿಶ್ವದಾದ್ಯಂತ ಜನಪ್ರಿಯತೆ ಹಾಗೂ ಬೇಡಿಕೆ ಪಡೆದಿದ್ದ, ಕೊಡಗಿನ ಕಿತ್ತಳೆ ವರ್ಷದಿಂದ ವರ್ಷಕ್ಕೆ ಕಿತ್ತಳೆ ನಾಡು ಕೊಡಗಿನಲ್ಲೇ ಮಾಯವಾಗುತ್ತಿವೆ. ವರ್ಷ ಕಳೆದಂತೆ ಕಿತ್ತಳೆ ಬೆಳೆಯಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಕೊಡಗಿನ ಕಿತ್ತಳೆಗೆ ಪುನಶ್ಚೇತನ ನೀಡಲು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಹೊಸ ಯೋಜನೆಯನ್ನು ರೂಪಿಸಿದ್ದು, ಎರಡು ಕೋಟಿ ರೂ. ವೆಚ್ಚದಲ್ಲಿ ಕೊಡಗಿನ ಕಿತ್ತಳೆಗೆ ಮರುಜೀವ ತುಂಬಲು ಸಿದ್ಧತೆ ನಡೆಸುತ್ತಿದ್ದಾರೆ. ಕೊಡಗಿನ ಕಿತ್ತಳೆ ಮತ್ತೆ ಘಮಘಮಿಸುವ ಆಶಾಭಾವನೆ ಮೂಡಿದೆ.

ಕೂರ್ಗ್ ಮ್ಯಾಂಡರಿನ್ ಪುನಶ್ಚೇತನಕ್ಕಾಗಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳು ರಾಷ್ಟಿçÃಯ ಕೃಷಿ ವಿಕಾಸ್ ಅಡಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ಸದ್ಯದಲ್ಲೇ ಕೊಡಗಿನ ಕಿತ್ತಳೆ ಮರುಜೀವ ಸಿಗುವ ಸಾಧ್ಯತೆಗಳಿವೆ.

ರೈತರಿಗೆ ಉಚಿತ ಕಿತ್ತಳೆ ಗಿಡ!

ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಕೂರ್ಗ್ ಮ್ಯಾಂಡರಿನ್ ಪುನಶ್ಚೇತನಕ್ಕಾಗಿ ಎರಡು ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಕಿತ್ತಳೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಕಿತ್ತಳೆ ಬೆಳೆಯಲು ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

ಈ ಮೂರು ಜಿಲ್ಲೆಯ ಬೆಳೆಗಾರರಿಗೆ ಉಚಿತವಾಗಿ ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ,ಕಿತ್ತಳೆ ಗಿಡಗಳನ್ನು ಉಚಿತವಾಗಿ ವಿತರಿಸಿ ಅವರಿಗೆ ಕಿತ್ತಳೆ ಬೆಳೆಯ ಬಗ್ಗೆ ಅರಿವು ಹಾಗೂ ಆಸಕ್ತಿ ಮೂಡಿಸುವ ಉದ್ದೇಶ ಕೈಗೊಂಡಿದ್ದಾರೆ. ಪ್ರಸ್ತಕ ದಿನಗಳಲ್ಲಿ ರೈತರೇ ಸ್ವತಃ ಕಿತ್ತಳೆ ಬೆಳೆಯಲು ಮುಂದಾಗದ ಕಾರಣದಿಂದ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಉಚಿತವಾಗಿ ಕಿತ್ತಳೆ ಗಿಡ ನೀಡಿ, ರೈತರಿಗೆ ಕಿತ್ತಳೆ ಬೆಳೆಯ ಬಗ್ಗೆ ಆಸಕ್ತಿ ಮೂಡಿಸಲು ಮುಂದಾಗಿದ್ದಾರೆ.

ಕೊಡಗಿನ ಕಿತ್ತಳೆ ಗಿಡಗಳನ್ನು ಅಭಿವೃದ್ಧಿಪಡಿಸಿ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಯ್ದ ಬೆಳೆಗಾರರನ್ನು ಆಯ್ಕೆ ಮಾಡಿ ಅವರಿಗೆ, ಕಿತ್ತಳೆ ಗಿಡಗಳನ್ನು ಉಚಿತವಾಗಿ ನೀಡಿ, ಗಿಡಕ್ಕೆ ಬೇಕಾದ ಕೀಟನಾಶಕ ಹಾಗೂ ಗಿಡದ ಘೋಷಣಾ ವೆಚ್ಚವನ್ನು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಇಲಾಖೆ ಭರಿಸಲಿದೆ.

ಕಿತ್ತಳೆಯ ಬೆಳೆಯ ಬಗ್ಗೆ ನಂಬಿ ಕಳೆದುಕೊಂಡಿರುವ ಬೆಳೆಗಾರರಿಗೆ, ಮತ್ತೆ ಕಿತ್ತಳೆ ಬೆಳೆಯತ್ತ ಮುಖಮಾಡಲು, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಇಲಾಖೆಯು ಹೊಸ ಯೋಜನೆಯನ್ನು ರೂಪಿಸಿ, ಕೂರ್ಗ್ ಮ್ಯಾಂಡರಿನ್ ಪುನಶ್ಚೇತನಗೊಳಿಸಲು ಸಜ್ಜಾಗಿದ್ದಾರೆ.

೩ ಸಾವಿರ ಎಕರೆ ಪ್ರದೇಶಕ್ಕಿಳಿದ ಕೊಡಗಿನ ಕಿತ್ತಳೆ ಬೆಳೆ!

ಕೊಡಗಿನ ಕಿತ್ತಳೆ ವಿಶ್ವವಿಖ್ಯಾತಿ ಪಡೆದಿದೆ. ಕೊಡಗಿನ ಕಿತ್ತಳೆ ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿದ್ದರೂ ಕೂಡ ರುಚಿ ಉತ್ಕೃಷ್ಟ. ಕೊಡಗಿನ ಕಿತ್ತಳೆಯನ್ನು ದಕ್ಷಿಣ ಭಾರತದ ವಿವಿಧೆಡೆಗಳಲ್ಲಿ ಬೆಳೆಯುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಕೊಡಗಿನ ಹವಾಮಾನದಲ್ಲಿ ಮಾತ್ರ ಕೊಡಗಿನ ಕಿತ್ತಳೆ ಬೆಳೆಯಲು ಸಾಧ್ಯ. ಕೊಡಗಿನ ಕಿತ್ತಳೆಗೆ ೨೦೦೫-೦೬ ರಲ್ಲಿ ಭೌಗೋಳಿಕವಾಗಿ ಸೂಚಕ ಸ್ಥಾನಮಾನ ದೊರಕಿದೆ.

ಭೌಗೋಳಿಕವಾಗಿ ಸೂಚಕ ಸ್ಥಾನಮಾನ ಸಿಕ್ಕಿರುವ ಕೂರ್ಗ್ ಮ್ಯಾಂಡರಿನ್ ಬೆಳೆಯುವ ಪ್ರದೇಶಗಳು ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿವೆ.

ಇದೀಗ ಕೂರ್ಗ್ ಮ್ಯಾಂಡರಿನ್ ಅಳಿವಿನಂಚಿಗೆ ತಲುಪಿದೆ. ೧೮೩೦ರ ಅವಧಿಯಲ್ಲಿ ಬಿಟ್ರಿಷರು ಕೊಡಗಿನ ಪರ್ವತ ಪ್ರದೇಶದ ಬಾಣೆ ಜಾಗದಲ್ಲಿ ಕಿತ್ತಳೆ ಬೆಳೆದಿದ್ದರು. ೧೯೪೦ರಲ್ಲಿ ೧೦ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದ ಕೂರ್ಗ್ ಮ್ಯಾಂಡರಿನ್ ೧೯೬೦-೭೦ ರಲ್ಲಿ ೫೦,೦೦೦ ಎಕರೆ ಪ್ರದೇಶಕ್ಕೆ ವ್ಯಾಪಿಸಿ ಕೊಡಗಿನ ಎಲ್ಲೆಲ್ಲೂ ಕಣ್ಣಾಡಿಸಿದರು ಕೂಡ,ಗೊಂಚಲು,ಗೊAಚಲು ಕಿತ್ತಳೆ ಕಾಣುತ್ತಿತ್ತು. ಕಿತ್ತಳೆ ಕೊಡಗಿನ ಜನರ, ಸಾಮಾಜಿಕ, ಆರ್ಥಿಕ ಜೀವನದ ಅವಿಭಾಜ್ಯ ಅಂಗವಾಗಿತ್ತು. ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಮಾರುಕಟ್ಟೆಯಲ್ಲಿ ಕೊಡಗಿನ ಕಿತ್ತಳೆ ಹಣ್ಣಿನ ಬೇಡಿಕೆಯೂ ಹೆಚ್ಚಾಗಿತ್ತು. ೧೯೪೨-೪೩ ರಲ್ಲಿ ಜಿಲ್ಲೆಯಲ್ಲಿ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ ಕೂಡ ಸ್ಥಾಪನೆಯಾಯಿತು. ಕೂರ್ಗ್ ಮ್ಯಾಂಡರಿನ್ ಬೆಳೆ ಅಭಿವೃದ್ಧಿಪಡಿಸಲು ಹಾಗೂ ಸಂಶೋಧಿಸಲು ೧೯೪೭ ರಲ್ಲಿ ಚೆಟ್ಟಳ್ಳಿಯಲ್ಲಿ ಕಿತ್ತಳೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಯಿತು. ನಂತರ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರವಾಗಿ ಮಾರ್ಪಡಿತ್ತು. ಇದೀಗ ಕೊಡಗಿನ ಕಿತ್ತಳೆ ಕೇವಲ ೨೫೦೦ ರಿಂದ ೩೦೦೦ ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದಾರೆ.

ಕೊಡಗಿನ ಕಾಫಿ ತೋಟಗಳ ಮಧ್ಯ, ಅಲ್ಲಲ್ಲಿ ಒಂದೆರಡು ಕಿತ್ತಳೆ ಕಂಡರೆ ಭಾಗ್ಯ ಎಂಬಲ್ಲಿಗೆ ವಿಶ್ವವಿಖ್ಯಾತಿ ಪಡೆದಿದ್ದ ಕೂರ್ಗ್ ಮ್ಯಾಂಡರಿನ್ ತಲುಪಿದೆ.

ಕಿತ್ತಳೆ ಹಣ್ಣಿಗೆ ಹಳದಿ ರೋಗ!

೧೯೫೦ರ ಅವಧಿಯಲ್ಲಿ ಕಿತ್ತಳೆ ಬೆಳೆಗೆ ಕಾಣಿಸಿಕೊಂಡ ಸಿಟ್ರಸ್ ಡೈ ಬ್ಯಾಕ್ ರೋಗ (ಹಳದಿ ರೋಗ) ಕೂರ್ಗ್ ಮ್ಯಾಂಡರಿನ್ ಅವಸಾನಕ್ಕೆ ಮುನ್ನುಡಿ ಬರೆಯಿತು. ೧೯೮೦ರಿಂದ ೯೦ರ ಅವಧಿಯಲ್ಲಂತೂ ಕೊಡಗಿನ ಕಿತ್ತಳೆಗೆ ಹಳದಿ ರೋಗ ಭಾದಿಸಿ ಅವನತಿಯ ಹಂತ ತಲುಪಿತು.

ಕಿತ್ತಳೆ ಗಿಡಗಳಿಗೆ ಹಳದಿ ರೋಗ ತಗುಲಿ, ಕಿತ್ತಳೆ ಅವಸಾನದತ್ತ ತಲುಪಿವೆ.

ಈ ಕಾರಣದಿಂದಲೇ ಜಿಲ್ಲೆಯ ಬೆಳಗಾರರು ಕಿತ್ತಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಅದಲ್ಲದೇ ಕಾಫಿ ಹಾಗೂ ಕರಿಮೆಣಸು ಬೆಳೆಯ ಮಧ್ಯೆ ಕಿತ್ತಳೆ ಗಿಡಗಳಿಗೆ ಭಾದಿಸಿರುವ ಹಳದಿ ರೋಗಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಎಂದು ಹೇಳಿ, ಕಿತ್ತಳೆ ಗಿಡಗಳನ್ನು ಬುಡಸಮೇತ ತೋಟಗಳಿಂದ ಕಿತ್ತು ಹಾಕಿದ್ದಾರೆ.

ತೋಟದ ನಿರ್ವಹಣೆಗೆ ಹರಸಾಹಸಪಡುತ್ತಿರುವ ಬೆಳೆಗಾರರು, ವರ್ಷ ಕಳೆದಂತೆ ಕಿತ್ತಳೆ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ.

ಕಿತ್ತಳೆ ಗಿಡಗಳಿಗೆ ತಗುಲಿರುವ ಹಳದಿ ರೋಗವನ್ನು ನಿಯಂತ್ರಿಸಲು ಬೆಳೆಗಾರರು ಕೂಡ ಆಸಕ್ತಿ ತೋರುತ್ತಿಲ್ಲ. ಕಾಫಿ ಹಾಗೂ ಕರಿಮೆಣಸು ಮುಖ್ಯ ಬೆಳೆಯಾಗಿರುವುದರಿಂದ ಬಹುತೇಕರು ಲಾಭದಾಯಕವಾದ ಕಿತ್ತಳೆ ಹಣ್ಣಿನ ಬೆಳೆಯನ್ನು ಬೆಳೆಯಲು ಹಿಂದೇಟು ಹಾಕಿದ್ದಾರೆ.

ಅದಲ್ಲದೇ ಕಿತ್ತಳೆ ಗಿಡಗಳಿಗೆ ತಗುಲಿರುವ ಹಳದಿ ರೋಗವನ್ನು ತಡೆಗಟ್ಟಲು, ರೋಗನಿರೋಧಕಗಳನ್ನು ಸಿಂಪಡಿಸಬೇಕಾಗಿರುವುದರಿAದ ಯಾರೂ ಕಿತ್ತಳೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಒಂದು ಕಿತ್ತಳೆ ಗಿಡಕ್ಕೆ ಹಳದಿ ರೋಗ ತಗುಲಿದರೆ, ಮತ್ತೊಂದು ಗಿಡಕ್ಕೆ ವೇಗವಾಗಿ ರೋಗ ಹರಡುತ್ತದೆ.

ಹೊಸದಾಗಿ ತೋಟದಲ್ಲಿ ಕಿತ್ತಳೆ ಗಿಡ ನೆಟ್ಟರೂ ಸಹಾ, ಆ ಗಿಡಗಳಿಗೂ ಸಹಾ ರೋಗ ಭಾದಿಸುತ್ತದೆ. ಮೈಕ್ರೋಯೂನಿಟಿಯನ್ ದಿನನಿತ್ಯ ಹಳದಿ ರೋಗಗಳು ಬಾರದಂತೆ ಕಿತ್ತಳೆ ಗಿಡಗಳಿಗೆ ಸಿಂಪಡಿಸಿ ರೋಗ ನಿಯಂತ್ರಿಸಬೇಕು. ಆದರೆ ಕಿತ್ತಳೆ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಬೆಳೆಗಾರರನ್ನು, ಕಿತ್ತಳೆಗೆ ತಗುಲಿಕೊಂಡಿರುವ ರೋಗಗಳ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ ತೋರಿರುವುದರಿಂದ ತೋಟಗಳಲ್ಲಿ ಕಿತ್ತಳೆ ಗಿಡಗಳು ಒಣಗಿ ನಶಿಸಿಹೋಗುತ್ತಿದೆ.

ಇದೀಗ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಇ ಕೂರ್ಗ್ ಮ್ಯಾಂಡರಿನ್‌ಗೆ ಪುನಶ್ಚೇತನ ತುಂಬಲು, ಹೊಸ ಯೋಜನೆಯನ್ನು ರೂಪಿಸಿದ್ದು, ಕೊಡಗಿನ ಕಿತ್ತಳೆ ಮತ್ತೆ ಗತವೈಭವಕ್ಕೆ ಮರಳುವ ಸಾಧ್ಯತೆಗಳಿವೆ. ಕಿತ್ತಳೆ ನಾಡಿನ ಕಿತ್ತಳೆ ಮತ್ತೆ ಘಮಘಮಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ