ಶನಿವಾರಸಂತೆ, ಫೆ. ೧೩: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆದ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭದ ದಿನ ಸಾಂಕೇತಿಕವಾಗಿ ಪ್ರದರ್ಶನಕ್ಕಾಗಿ ಬಂದಿದ್ದ ಜಾನುವಾರುಗಳಿಗೆ ಬಹುಮಾನಗಳನ್ನು ನೀಡಿ, ರೈತರನ್ನು ಗೌರವಿಸಲಾಯಿತು.

ಜಾನುವಾರುಗಳು ಜಾತ್ರೆಗೆ ಬಂದವರ ಗಮನ ಸೆಳೆದು ರಂಜಿಸಿದವು. ವಿವಿಧ ತಳಿಗಳ ಜಾನುವಾರುಗಳನ್ನು ಕಂಡು ಕೊನೆಯ ದಿನದಲ್ಲಾದರೂ ಜಾನುವಾರುಗಳ ದರ್ಶನವಾಯಿತಲ್ಲಾ ಎಂದು ಜನರು ಸಂಭ್ರಮಿಸಿದರು.

ಜಾತ್ರೆಗೆ ಬಂದಿದ್ದ ೧೫ ಜಾನುವಾರುಗಳನ್ನು ಶನಿವಾರಸಂತೆಯ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ಬಿ.ಎಂ. ಸತೀಶ್, ಪಶು ವೈದ್ಯಕೀಯ ಪರಿವೀಕ್ಷಕರಾದ ಎಸ್.ಪಿ. ಧರ್ಮರಾಜ್ ಹಾಗೂ ಸರ್ವರ್ ಪಾಷಾ ಪರೀಕ್ಷಿಸಿ ಬಹುಮಾನಗಳಿಗೆ ಆಯ್ಕೆ ಮಾಡಿದರು.

ಪ್ರಥಮ ಬಹುಮಾನಕ್ಕೆ ಶಿಡಿಗಳಲೆ ಗ್ರಾಮದ ರೈತ ನಾಗರಾಜ್ ಅವರ ಹಾಲು ಹಲ್ಲಿನ ಹೋರಿ, ಆಲೂರುಸಿದ್ದಾಪುರದ ಮಲ್ಲಿಕಾರ್ಜುನ್ ಅವರ ೨ ಹಲ್ಲಿನ ಹೋರಿಗಳು, ಜಾಗೇನಹಳ್ಳಿಯ ಸುರೇಶ್ ಅವರ ಹಾಲಿನ ಮಿಶ್ರತಳಿ ಹಸುಗಳು, ಕೆರೆಹಳ್ಳಿಯ ಮೇಘನಾ ಮಹೇಂದ್ರರ ಮಿಶ್ರತಳಿ ಕಡಸು, ಯಸಳೂರು ಗ್ರಾಮದ ನಾಗರಾಜ್ ಅವರ ಮಿಶ್ರತಳಿ ಗರ್ಭದ ಹಸುಗಳು, ಕೆರೆಹಳ್ಳಿಯ ಸಾಧನ ಶಶಿಕಲಾರ ದೇಶಿಯ ಕಡಸುಗಳು, ಉಚ್ಚಂಗಿ-ನಾಗನಹಳ್ಳಿಯ ಅಶೋಕರ ಮುರ್ರಾ ಕೋಣಗಳು ಹಾಗೂ ಹನಸೆ ಗ್ರಾಮದ ಸೋಮೇಗೌಡರ ಮುರ್ರಾ ಕಡಸು ಆಯ್ಕೆಯಾಗಿ ಬಹುಮಾನ ಗಳಿಸಿದವು.

ಕಿತ್ತೂರು ಗ್ರಾಮದ ರೂಪಿತ್ ಅವರ ಹಾಲಿನ ಮಿಶ್ರತಳಿ ಹಸುಗಳು, ಯಶಳೂರಿನ ಕುಮಾರರ ಮಿಶ್ರತಳಿ ಗರ್ಭದ ಹಸುಗಳು, ಹನಸೆ ಗ್ರಾಮದ ಮಂಜಣ್ಣನವರ ದೇಶಿಯ ಕಡಸುಗಳಿಗೆ ದ್ವಿತೀಯ ಬಹುಮಾನ ಶಿರಂಗಾಲದ ಲಕ್ಷಿö್ಮÃ ವೈರಮುಡಿಯವರ ಮಿಶ್ರತಳಿ ಗರ್ಭದ ಹಸುಗಳಿಗೆ ತೃತೀಯ ಬಹುಮಾನ ಲಭಿಸಿತು. ಕೆರೆಹಳ್ಳಿಯ ಮಹೇಂದ್ರರ ಎಚ್.ಎಫ್.ವಿದೇಶಿ ಪ್ರಥಮ ದರ್ಜೆ ಹೋರಿ ಹಾಗೂ ಕಿತ್ತೂರಿನ ಪ್ರಿಯಾ ಮಂಗಳಾರ ದೇಶಿಯ ವಿಶೇಷ ತಳಿ ಕಡಸಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.