ಚೆಯ್ಯಂಡಾಣೆ, ಫೆ ೧೪. ಸ್ವಸಹಾಯ ಸಂಘಗಳು ಆಯೋಜಿಸುವ ಕಾರ್ಯಕ್ರಮಗಳ ಮುಖಾಂತರ ಮಹಿಳೆಯರು ಸ್ವಉದ್ಯೋಗದ ಮೂಲಕ ಮುನ್ನಲೆಗೆ ಬರಬೇಕು ಎಂದು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಕರೆ ನೀಡಿದರು.

ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಲಕ್ಷ್ಮಿ ಮಹಿಳಾ ಸಮಾಜ ಕಟ್ಟಡದಲ್ಲಿ ಸಂಜೀವಿನಿ ಸಂತೆ ಮೇಳ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲಾ ಕ್ಷೇತ್ರಗಳನ್ನು ಮುಂದೆ ಬಂದು ಕಾರ್ಯ ಪ್ರವೃತ್ತರಾಗಿದ್ದಾರೆ. ಉಳಿದ ಮಹಿಳೆಯರಿಗೆ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಸAಜೀವಿನಿ ಒಕ್ಕೂಟದ ಮಡಿಕೇರಿ ತಾಲೂಕು ಮೇಲ್ವಿಚಾರಕಿ ಶ್ವೇತಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿದರು.

ಸಂಜೀವಿನ ಸಂತೆ ಮೇಳದಲ್ಲಿ ೧೩ ಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.

ಮೇಳದಲ್ಲಿ ವಸ್ತುಪ್ರದರ್ಶನ, ವಿವಿಧ ಬಗೆಯ ತರಕಾರಿ, ಹಣ್ಣುಹಂಪಲು, ಜೇನು, ತುಪ್ಪ, ಉಪ್ಪಿನಕಾಯಿ, ಕರಕುಶಲ ವಸ್ತುಗಳು, ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡಿ ಮಹಿಳೆಯರು ಮೆಚ್ಚುಗೆ ಗಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬಿ.ಎಸ್. ಪುಷ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸಂಜೀವಿನಿ ಒಕ್ಕೂಟದ ಮಡಿಕೇರಿ ವಲಯ ಮೇಲ್ವಿಚಾರಕಿ ಪವಿತ್ರ, ಜಿಲ್ಲಾ ಪಂಚಾಯಿತಿ ವ್ಯವಸ್ಥಾಪಕ ಜಗನ್ನಾಥ್, ಎಂಬಿಕೆ ವಸಂತಿ, ಸಂಜೀವಿನಿ ಒಕ್ಕೂಟದ ಪಶು ಸಖಿ ಮೀನಾಕ್ಷಿ, ಎಲ್‌ಸಿಆರ್‌ಪಿ ನಲೀನಿ, ಎಫ್‌ಎಲ್ ಸಿಆರ್‌ಪಿ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.