ಮಡಿಕೇರಿ, ಫೆ. ೧೫: ಸರಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳನ್ನು ಖಾಸಗಿಯವರಿಗೆ ಬಿಟ್ಟುಕೊಡಬೇಕೆಂದು ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಅಧ್ಯಕ್ಷ ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವರಮಾನ ಬರುವ ಖಾಸಗಿ ದೇವಾಲಯಗಳನ್ನು ಸರಕಾರ ವಶಪಡಿಸಿಕೊಳ್ಳುವುದಾದರೆ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ಖಾಸಗಿ ಕಾಲೇಜು, ಮದ್ಯ ಫ್ಯಾಕ್ಟರಿಗಳನ್ನು ಕೂಡ ವಶಪಡಿಸಿಕೊಳ್ಳಲಿ. ಅದನ್ನು ಬಿಟ್ಟು ಕೇವಲ ದೇವಾಲಯಗಳನ್ನು ಮಾತ್ರ ವಶಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.

ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರಿಗೆ, ಕಾರ್ಮಿಕರಿಗೆ ಸೂಕ್ತ ವೇತನವನ್ನು ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಮುಜರಾಯಿ ಇಲಾಖೆಗೆ ಬರುವ ಆದಾಯದಿಂದ ಸರಕಾರಿ ಶಾಲಾ ಕಟ್ಟಡಗಳ ನವೀಕರಣವಾಗಲಿ, ಸರಕಾರಿ ಆಸ್ಪತ್ರೆಗಳಲ್ಲಿ ಔಷಧೋಪಚಾರಗಳಿಗೆ ಈ ಹಣ ಬಳಕೆಯಾಗಲಿ ಎಂದು ಒತ್ತಾಯಿಸಿದರು.

ಈ ವಿಚಾರಕ್ಕೆ ಸಂಬAಧಿಸಿದAತೆ ತಾ. ೧೬ ರಂದು (ಇಂದು) ನಗರದ ಖಾಸಗಿ ಸಭಾಂಗಣದಲ್ಲಿ ಸಂಜೆ ೪ ಗಂಟೆಗೆ ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ ಚರ್ಚಿಸಿದ ಬಳಿಕ ಸರಕಾರದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ರವಿ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರದೀಪ್ ಕರ್ಕೆರ ಉಪಸ್ಥಿತರಿದ್ದರು.