ಮಡಿಕೇರಿ, ಫೆ. ೧೫: ಇಲ್ಲೇ. ಇಲ್ಲೇ.. ನಮ್ ಅರ್ಜುನ ಕಾಡಾನೆ ಜತೆ ಕಾದಾಡಿದ್ದು... ಅಲ್ಲೇ ನೋಡಿ ಅರ್ಜುನ ಕಾಡಾನೆಯನ್ನು ಹಿಮ್ಮೆಟ್ಟಿಸಿದ್ದು ಆ ಜಾಗದಲ್ಲಿಯೇ ನಮ್ಮೆಲ್ಲರ ಪ್ರೀತಿಯ ಅರ್ಜುನ ಮಣ್ಣುಪಾಲಾದದ್ದು..

ಹೀಗೆ ಅರ್ಜುನ ಎಂಬ ಆನೆಯ ಹೋರಾಟದ ರೋಚಕತೆ ಮತ್ತು ದುರಂತ ಅಂತ್ಯವನ್ನು ವರ್ಣಿಸುತ್ತಿದ್ದ ಪ್ರವೀಣ್ ಮನಸ್ಸಿನಲ್ಲಿ ಅರ್ಜುನ ತನ್ನೂರಿನಲ್ಲಿಯೇ ಮಣ್ಣಾದ ನೋವು ಹೆಪ್ಪುಗಟ್ಟಿತ್ತು. ಹೀಗೆಂದೇ ದಿನಕ್ಕೊಮ್ಮೆಯಾದರೂ ಪ್ರವೀಣ್ ತನ್ನ ಮನೆ ಬಳಿಯೇ ಇರುವ ಅರ್ಜುನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪಟ್ಟದಾನೆಗೊಂದು ನೋವಿನ ನಮನ ಸಲ್ಲಿಸಿ ಭಾವಪರವಶತೆಯಿಂದ ಮರಳುತ್ತಾರೆ.

ಇಂಥ ದೃಶ್ಯ ಕಂಡುಬರುವುದು ಕೊಡಗು-ಹಾಸನ ಜಿಲ್ಲೆಗಳ ಗಡಿ ಗ್ರಾಮವಾದ ಎಸಳೂರು ಬಳಿಯ ಬಾಳೆಕೆರೆ ಮತ್ತು ಮತ್ತೂರು ಸಮೀಪದ ದಟ್ಟಾರಣ್ಯದಲ್ಲಿ. ಕಳೆದ ಡಿಸೆಂಬರ್ ೪ ರಂದು ಇದೇ ಸ್ಥಳದಲ್ಲಿ ಮೈಸೂರು ದಸರಾದಲ್ಲಿ ೮ ವರ್ಷಗಳ ಕಾಲ ಪಟ್ಟದಾನೆಯಾಗಿದ್ದ, ನಾಡದೇವತೆ ಶ್ರೀಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ, ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭ ಏಕಾಏಕಿ ಎರಗಿದ ಕಾಡಾನೆ ಧಾಳಿಗೆ ಸಿಲುಕಿ ವೀರಾವೇಶದಿಂದ ಕೊನೇ ತನಕ ಹೋರಾಡಿ ಅಂತಿಮವಾಗಿ ವೀರಮರಣವನ್ನಪ್ಪಿದ್ದ.

ಯಾವ ಜಾಗದಲ್ಲಿ ಅರ್ಜುನ ಸಾವನ್ನಪ್ಪಿದ್ದನೋ ಅದೇ ಜಾಗ ಈಗ, ಅಪಾರ ಸಂದರ್ಶಕರ ಭೇಟಿಯ ತಾಣವಾಗಿ ಪರಿವರ್ತನೆಯಾಗಿದೆ. ವಾರಾಂತ್ಯದಲ್ಲಿ ೫೦೦ಕ್ಕೂ ಅಧಿಕ ಜನರು ಭೇಟಿ ನೀಡಿದರೆ ಬೇರೆ ದಿನಗಳಲ್ಲಿ ೧೦೦-೨೦೦ ಜನರಾದರೂ ಇಲ್ಲಿಗೆ ಭೇಟಿ ನೀಡಿ ಅರ್ಜುನನ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸುತ್ತಿದ್ದಾರೆ.

ಅರ್ಜುನನನ್ನು ಮಣ್ಣುಪಾಲು ಮಾಡಲಾದ ಸ್ಥಳದಲ್ಲಿ ತಾತ್ಕಾಲಿಕ ಸಮಾಧಿ ರೂಪುಗೊಂಡಿದೆ . ನಾಡಹಬ್ಬ ದಸರಾದ ಪಟ್ಟದಾನೆಯಾಗಿದ್ದ ಅರ್ಜುನನಿಗೆ ಮರ್ಯಾದೆಯ ದ್ಯೋತಕ ಎಂಬAತೆ ಆತನ ಸಮಾಧಿ ಮುಂದೆ ಮೈಸೂರು ಪೇಠ ಇರಿಸಲಾಗಿದೆ. ಸಮಾಧಿ ಸ್ಥಳದಲ್ಲಿ ನಿತ್ಯವೂ ದೀಪ ಬೆಳಗಿಸಲಾಗುತ್ತಿದೆ ಸಮಾಧಿಗೆ ಪೂಜೆ ಸಲ್ಲಿಸಲು, ಸಮಾಧಿ ವೀಕ್ಷಿಸಲು ಇಲ್ಲಿಗೆ ಬರುವ ಜನರು ತರುವ ಹೂ ಹಾರ, ಹಾಲು ಇತ್ಯಾದಿಗಳು ಸಮಾಧಿ ಸ್ಥಳದಲ್ಲಿ ಹೇರಳವಾಗಿ ಕಂಡುಬರುತ್ತದೆ.

ಸಮಾಧಿ ಸ್ಥಳಕ್ಕೆ ತೆರಳುವ ಕಾಡಿನ ನಡುವಿನ ಹಾದಿಯ ಇಕ್ಕೆಲಗಳಲ್ಲಿ ಕೇಸರಿ ತೋರಣದಿಂದ ಅಲಂಕಾರ ಮಾಡಲಾಗಿದ್ದು, ಸಮಾಧಿ ಸ್ಥಳದ ಸುತ್ತಲೂ ಕಾಡಾನೆ ಸೇರಿದಂತೆ ಬೇರೆ ವನ್ಯಜೀವಿಗಳು ನುಗ್ಗದಂತೆ ತಂತಿ ಬೇಲಿ ಹಾಕಲಾಗಿದೆ.

ದಿನವೂ ಸಮಾಧಿ ಸ್ಥಳದಲ್ಲಿ ಅರಣ್ಯ ಇಲಾಖೆಯ ಇಬ್ಬರು ಗಾರ್ಡ್ಗಳು ಸಮಾಧಿ ರಕ್ಷಣೆಯ ಉಸ್ತುವಾರಿಗೆ ನಿಯೋಜಿತರಾಗಿದ್ದಾರೆ. ದಟ್ಟಕಾಡಿನ ನಡುವಿನ ಸಮಾಧಿ ಸ್ಥಳದಲ್ಲಿ ಕಾಡಾನೆ ಧಾಳಿಯ ಭೀತಿಯ ನಡುವೇ ಈ ಅರಣ್ಯ ರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಪರ್ಯಾಸ ಎಂದರೆ ಈ ಅರಣ್ಯ ಸಿಬ್ಬಂದಿಗಳಿಗೆ ಕೋವಿಯನ್ನೇ ನೀಡದೆ ಅರಣ್ಯ ಇಲಾಖೆ ಲಾಠಿ ಮಾತ್ರ ನೀಡಿದೆ. ಅಕಸ್ಮಾತ್ ಕಾಡಾನೆ ಸೇರಿದಂತೆ ಬೇರೆ ವನ್ಯಜೀವಿಗಳು ಧಾಳಿ ನಡೆಸಿದರೆ ಲಾಠಿಯ ಸಹಾಯದಿಂದ ಇವರು ಬಚಾವಾಗಬೇಕು. ಕನಿಷ್ಟ ಪಕ್ಷ ಇವರ ಧೈರ್ಯಕ್ಕಾದರೂ ಕೋವಿಯನ್ನು ನೀಡಲು ಅರಣ್ಯ ಇಲಾಖೆಗೆ ಅದೆಂಥ ಸೋಮಾರಿತನ ಎಂಬುದೇ ತಿಳಿಯದಾಗಿದೆ.

ಅರ್ಜುನ ಸಮಾಧಿ ಸ್ಥಳಕ್ಕೆ ತೆರಳುವ ಕಚ್ಚಾರಸ್ತೆಯ ಅಲ್ಲಲ್ಲಿ ವೀರಮರಣವನ್ನಪ್ಪಿದ ಅರ್ಜುನನ ಸಮಾಧಿ ಸ್ಥಳಕ್ಕೆ ತೆರಳುವ ರಸ್ತೆ ಎಂಬ ಸೂಚನಾ ಫಲಕಗಳಿವೆ. ಎಸಳೂರು ಗ್ರಾಮದ ಬಹುತೇಕ ಅಂಗಡಿಗಳಲ್ಲಿ ಅರ್ಜುನನಿಗೆ ಶ್ರದ್ಧಾಂಜಲಿ ಸಲ್ಲಿಸುವ ರೀತಿಯಲ್ಲಿ ಅರ್ಜುನನ ಫೋಟೋಗಳ ಫ್ಲೆಕ್ಸ್ಗಳು ಕಂಡು ಬರುತ್ತದೆ.

ನಾವಿನ್ನೂ ಅರ್ಜುನನ ಸಾವಿನ ಶೋಕದಿಂದ ಚೇತರಿಸಿಕೊಂಡಿಲ್ಲ. ನಮ್ಮ ಹಳ್ಳಿಯ ಕಾಫಿ ತೋಟ, ಗದ್ದೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಕೃಷಿ ಫಸಲು ಹಾಳುಗೆಡವುತ್ತಿದ್ದ ಕಾಡಾನೆ ಹಿಡಿಯಲೆಂದು ರಾಜಾರೋಷದಿಂದ ಬಾಳೆಕೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿಯೇ ಗಾಂಭೀರ್ಯದಿAದ ಸಾಗಿದ ಅರ್ಜುನ ಕೊನೆಗೆ ನಮ್ಮೂರಿನಲ್ಲಿಯೇ ಸಮಾಧಿಯಾದ ನೋವನ್ನು ಗ್ರಾಮಸ್ಥರಿಂದ ಮರೆಯಲಾಗುತ್ತಿಲ್ಲ. ಕೊಂಚ ಸಮಧಾನ ಎಂದರೆ ಇಲ್ಲಿಯೇ ಸಾವನ್ನಪ್ಪಿದ ಅರ್ಜುನನಿಗೆ ಇಲ್ಲಿಯೇ ಸಮಾಧಿ ಮಾಡಿದ್ದು. ಬೇಸರವಾದಾಗಲೆಲ್ಲಾ ಮನೆಮಂದಿ ತಮ್ಮ ಮನೆಯ ಜೀವಿ ಎಂಬAತೆ ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅರ್ಜುನ ಮತ್ತೆ ಮರಳಿ ಬಂದಾನು ಎಂಬ ನಿರೀಕ್ಷೆ ನಮ್ಮೆಲ್ಲರಲ್ಲಿಯೂ ಇನ್ನೂ ಜೀವಂತವಾಗಿದೆ ಎಂದು ಬಾಳೆಕೆರೆ ನಿವಾಸಿ ಯೋಗೇಶ್ ಹೇಳಿದರು.

ಅರ್ಜುನ ವೀರಮರಣವನ್ನಪ್ಪಿದಾಗ ಕರ್ನಾಟಕದಾದ್ಯಂತ ಶೋಕ ಮಡುಗಟ್ಟಿತ್ತಲ್ಲ ಸಾರ್. ಆಗ ಮುಖ್ಯಮಂತ್ರಿ, ಅರಣ್ಯ ಸಚಿವರೂ ಸೇರಿದಂತೆ ಎಲ್ಲರೂ ಅರ್ಜುನನಿಗೆ ಆತ ಸಾವನ್ನಪ್ಪಿದ್ದ ಜಾಗದಲ್ಲಿಯೇ ಸ್ಮಾರಕ ನಿರ್ಮಿಸುತ್ತೇವೆ ಎಂದು ಘೋಷಣೆ ಮಾಡಿದ್ದರಲ್ಲ ಸಾರ್. ಅರ್ಜುನ ಸಾವನ್ನಪ್ಪಿ ೬೦ ದಿನ ಕಳೆದರೂ ಎಲ್ಲಿದೆ ಸ್ಮಾರಕ ಎಂದು ಆಕ್ರೋಷ ಹೊರಹಾಕಿದರು ಗ್ರಾಮಸ್ಥ ಯೋಗೇಶ್.

ಸಮಾಧಿ ಸ್ಥಳದ ಸುತ್ತ ಅಲ್ಲಲ್ಲಿ ಅರ್ಜುನನ ಫೋಟೋಗಳು ರಾರಾಜಿಸುತ್ತಿವೆಯಾದರೂ ಅರ್ಜುನನ ಮಹತ್ವ ಸಾರುವ ಮಾಹಿತಿಯನ್ನು ಇಲ್ಲಿ ಹಾಕಲಾಗಿಲ್ಲ. ಅರಣ್ಯ ಇಲಾಖೆಯ ಪಾಲಿಗೆ ಪ್ರತಿಷ್ಠೆಯ ಗಜನಾಗಿದ್ದ ಅರ್ಜುನ ಸಾಹಸ ಸಾರುವ, ವೀರ ಅಂತ್ಯ ಹೇಳುವ ಮಾಹಿತಿಯನ್ನು ಸಮಾಧಿ ಸ್ಥಳದಲ್ಲಿ ಇನ್ನಾದರೂ ಅಳವಡಿಸುವ ಅಗತ್ಯವಿದೆ.

ಅರ್ಜುನ ಸಾವನ್ನಪ್ಪಿದ ಕೆಲದಿನಗಳ ಕಾಲ ನಿತ್ಯವೂ ಇಲ್ಲಿಗೆ ಕಾಡಾನೆಯೊಂದು ಬರುತ್ತಿತ್ತಂತೆ, ಸಮಾಧಿ ಸ್ಥಳದ ಸುತ್ತಲೂ ಸಾಗಿ ಕಾಡಿಗೆ ಮರಳುತ್ತಿತ್ತಂತೆ. ಆದರೆ ನಂತರ ಕಾಡಾನೆ ಕಾಣಿಸಲಿಲ್ಲವಂತೆ. ಅದರ ಬದಲಿಗೆ ಸೌಮ್ಯ ಸ್ವಭಾವದ ಯಾರಿಗೂ ಭಯ ಉಂಟು ಮಾಡದ ಕಾಡಾನೆಯೊಂದು ಬಾಳೆಕೆರೆ, ಎಸಳೂರು ಗ್ರಾಮ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಸಂಚರಿಸುತ್ತಿರುವುದು ಗ್ರಾಮಸ್ಥರ ಸೋಜಿಗಕ್ಕೆ ಕಾರಣವಾಗಿದೆ. ಅಂದAತೆ ಅರ್ಜುನನ ಜತೆ ಕಾದಾಡಿದ್ದ ಕಾಡಾನೆ ಮಾತ್ರ ಇಂದಿಗೂ ನಾಪತ್ತೆಯಾಗಿಯೇ ಇದೆ. ಅರ್ಜುನನ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಸೆರೆಹಿಡಿಯೇ ಸಿದ್ಧ ಎಂದು ಹೂಂಕರಿಸಿದ್ದ ಅರಣ್ಯ ಇಲಾಖಾಧಿಕಾರಿಗಳು ೩ ತಿಂಗಳಾದರೂ ಕಾಡಾನೆಯ ಸೆರೆಗೆ ಮುಂದಾಗಲಿಲ್ಲ. ಅರ್ಜುನನ ಸಾವಿನ ಸೇಡು ತೀರಿಸಿಕೊಳ್ಳುವ ಆಸಕ್ತಿ ಯಾರಿಗೂ ಇದ್ದಂತಿಲ್ಲ.

ಅರ್ಜುನನ ಸಮಾಧಿ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನಿಂದ ಸಂದರ್ಶಕರು ಬರುತ್ತಿದ್ದರೆ, ಸಕಲೇಶಪುರ, ಹಾಸನ, ಅರಸೀಕೆರೆಗಳಿಂದಲೂ ಸಂದರ್ಶಕರು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಮಹಿಳೆಯರಂತೂ ಸಮಾಧಿ ಸ್ಥಳದಲ್ಲಿ ಅರ್ಜುನನ ಪರಾಕ್ರಮ ನೆನಪಿಸಿಕೊಂಡು ಅವನಿಲ್ಲ ಎಂದು ಕಣ್ಣೀರಿಡುವುದು ಸಾಮಾನ್ಯವಾಗಿದೆ ಎಂದು ಪ್ರವೀಣ್ ಸ್ಮರಿಸಿಕೊಳ್ಳುತ್ತಾರೆ. ಕಾಡಾನೆಯೊಂದಿಗೆ ಸುಮಾರು ಎರಡು ಕಿ. ಮೀ. ವ್ಯಾಪ್ತಿಯಲ್ಲಿ ಅರ್ಜುನ ಕಾದಾಟ ನಡೆಸಿದ್ದ ಸಂದರ್ಭ ಧರಾಶಾಹಿಯಾದ ಮರಗಳು, ಕಾಡು ಗಿಡಗಳು, ಜರಿದ ಮಣ್ಣು ಗುಡ್ಡ ಎಲ್ಲವೂ ಅಂದಿನ ವೀರರ ಕಾದಾಟದ ಕುರುಹುಗಳಾಗಿ ಇಂದಿಗೂ ಕಂಡು ಬರುತ್ತಿದೆ. ಸಂದರ್ಶಕರಿಗೆ ಸ್ಥಳೀಯರು ಈ ಜಾಗವನ್ನೆಲ್ಲಾ ತೋರಿಸಿ ಅಂದು ನಡೆದ ಘಟನೆಯನ್ನು ತಾಜಾ ಎಂಬAತೆ ವರ್ಣಿಸುತ್ತಿದ್ದಾರೆ. ಬಾಳೆ ಕೆರೆ ಇರಲಿ, ಎಸಳೂರು ಇರಲಿ.. ಸ್ಥಳೀಯರು ನೋವಿನಿಂದ ಹೇಳುವುದು.

ರಾಜನ ಹಾಗೇ ಬಂದು, ರಾಜನಂತೆ ವೀರಾವೇಶದಿಂದ ಕಾದಾಡಿ ವೀರ ಮರಣವನ್ನಪ್ಪಿದ್ಯಲ್ಲೋ ನನ್ನಪ್ಪಾ, ನಿನ್ನ ಆತ್ಮ ಶಾಂತವಾಗಿರಲಿ ಕಣೋ ನನ್ನ ದೊರೆ...! ಜೀವಂತವಾಗಿದ್ದಾಗಲೂ ಸಾವಿರಾರು ಜನರ ಕಣ್ಮನ ಸೆಳೆದಿದ್ದ ಗಜಪಡೆಗಳ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ ಮೇಲೂ ಸಾವಿರಾರು ಜನರ ಮನದಲ್ಲಿ ನೆಲೆನಿಂತಿದ್ದಾನೆ.

- ಅನಿಲ್ ಎಚ್.ಟಿ.