ಗುಡ್ಡೆಹೊಸೂರು, ಫೆ. ೧೫: ಇಲ್ಲಿನ ಬೊಳ್ಳೂರು ಗ್ರಾಮದ ಸರ್ವೆ ನಂ. ೧/೧ ರಲ್ಲಿ ವಾಸವಿದ್ದ ೧೭೦ ಕುಟುಂಬಗಳ ಪೈಕಿ ೧೨೬ ಮಂದಿಗೆ ಹಕ್ಕು ಪತ್ರವನ್ನು ಶಾಸಕರಾದ ಡಾ. ಮಂಥರ್ ಗೌಡ ಅವರು ವಿತರಿಸಿದರು.

ಸುಮಾರು ೧೦ ವರ್ಷದಿಂದ ಅಲ್ಲಿನ ನಿವಾಸಿಗಳು ಹಕ್ಕುಪತ್ರಕ್ಕಾಗಿ ಹೋರಾಡುತ್ತಿದ್ದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಕೂಡ ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ಬೊಳ್ಳೂರು ಗ್ರಾಮದ ಸಮುದಾಯ ಭವನದಲ್ಲಿ ಅರಣ್ಯ ಅಧಿಕಾರಿಗಳ ಮತ್ತು ಕಂದಾಯ ಇಲಾಖಾಧಿಕಾರಿಗಳ ಸಭೆಯನ್ನು ಹಲವು ಬಾರಿ ರಚನೆ ಮಾಡಲಾಗಿತ್ತು.

ಆದರೆ ಹಕ್ಕುಪತ್ರ ವಿತರಣೆ ಕಾರ್ಯ ವಿಳಂಬವಾಗಿತ್ತು. ಇಲ್ಲಿನ ಸಮುದಾಯ ಭವನದಲ್ಲಿ ಸುಮಾರು ೧೬೦ ಮಂದಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಯಿತು.

ಸುಮಾರು ೩೦ ಮಂದಿಗೆ ಹಕ್ಕು ಪತ್ರ ಇಲಾಖೆ ವತಿಯಿಂದ ನೀಡಲಾಗಿಲ್ಲ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಸಭೆ ಕರೆದು ಉಳಿದವರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಈ ಸಂಧರ್ಭ ಉಪತಹಶೀಲ್ದಾರ್ ಮಧುಸೂದನ, ವಲಯ ಅರಣ್ಯಾಧಿಕಾರಿ ರತನ್‌ಕುಮಾರ್, ಉಪ ವಲಯ ಅರಣ್ಯಧಿಕಾರಿ ಅನಿಲ್ ಡಿಸೋಜಾ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಸಿದ್ದೇಗೌಡ ಮುಂತಾದವರು ಹಾಜರಿದ್ದರು.

ವೇದಿಕೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷರಾದ ಪಟ್ಟು ಮಾದಪ್ಪ ಮತ್ತು ಸರ್ವ ಸದಸ್ಯರು ಹಾಜರಿದ್ದರು. ಪಿ.ಡಿ.ಓ ಸುಮೇಶ್ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಸ್ವಾಮಿ ವಂದಿಸಿದರು.

ಈ ಸಂದರ್ಭ ಪಂಚಾಯಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ ತಕ್ಷಣ ಸ್ಥಳ ಗುರುತಿಸಿ ಆದಷ್ಟು ಬೇಗ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಿಗೆ ಮತ್ತು ಪಂಚಾಯಿತಿ ಅಧಿಕಾರಿ ಸುಮೇಶ್ ಅವರಿಗೆ ಸೂಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜನ, ಬಿ.ಎಸ್. ಚಂದ್ರಶೇಖರ್ ಮುಂತಾದವರು ಹಾಜರಿದ್ದರು.