ಚೆಟ್ಟಳ್ಳಿ, ಫೆ. ೧೫: ಕಾಫಿ ಮಂಡಳಿ ಹಾಗೂ ಕಾಫಿ ಸಂಶೋಧನಾ ಉಪಕೇಂದ್ರ ಸಹಯೋಗದಲ್ಲಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನವನ್ನು ಸೋಮವಾರಪೇಟೆ ತಾಲೂಕಿನಲ್ಲಿ ನಡೆಸಲಾಗುತ್ತಿದೆ.

ಕೂಗೆಕೋಡಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಫಿ ತೋಟಗಳ ಮಣ್ಣಿನ ಮಾದರಿ ಪರೀಕ್ಷೆ ಮೂಲಕ ಪೋಷಕಾಂಶ ನಿರ್ವಹಣೆ ಹಾಗೂ ಇತರ ಕಾಫಿ ಕೃಷಿ ಬಗ್ಗೆ ಕಾರ್ಯಾಗಾರವನ್ನು ನುರಿತ ಕಾಫಿ ಮಂಡಳಿ ತಜ್ಞರಿಂದ ನಡೆಸಲಾಯಿತು. ನಂತರ ಕೊಡ್ಲಿಪೇಟೆ, ನೀರಗುಂದ, ಕಂಬಿಬಾಣೆ, ಅತ್ತೂರು-ನಲ್ಲೂರು, ಸುಂಟಿಕೊಪ್ಪದಲ್ಲಿ ಮಣ್ಣು ಪರೀಕ್ಷಾ ಅಭಿಯಾನವನ್ನು ನಡೆಸಲಾಗಿ ರಿಯಾಯಿತಿ ದರದಲ್ಲಿ ಮಣ್ಣು ಪರೀಕ್ಷೆ ಮಾಡಲಾಯಿತು. ಸ್ಥಳೀಯ ಹಲವು ಬೆಳೆಗಾರರು ತೋಟದ ಮಣ್ಣನ್ನು ತಂದು ಮಣ್ಣಿನ ಪರೀಕ್ಷೆ ಮಾಡಿಸಿದರು. ಕಾಫಿ ಮಂಡಳಿಯ ಉಪನಿರ್ದೇಶಕ ಡಾ. ಚಂದ್ರಶೇಖರ್, ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಉಪನಿರ್ದೇಶಕ ಡಾ. ಚಂದ್ರಪ್ಪ ಅವರ ಮಾರ್ಗ ದರ್ಶನದಲ್ಲಿ ನಡೆದ ಅಭಿಯಾನ ಕಾರ್ಯಕ್ರಮದಲ್ಲಿ ಕಿರಿಯ ಸಂಪರ್ಕಾಧಿಕಾರಿ ರಂಜಿತ್ ಕುಮಾರ್ ಬಿ.ವಿ, ಸಂಪರ್ಕಾಧಿಕಾರಿ ಡಾ. ಸೀನಾ ಮೋಹನ್, ಲಕ್ಷಿö್ಮಕಾಂತ್, ಮಣ್ಣುವಿಜ್ಞಾನಿ ಡಾ. ನದಾಫ್, ಸಿಬ್ಬಂದಿಗಳು ಹಾಜರಿದ್ದರು.