ಕಣಿವೆ, ಫೆ. ೧೫: ಕಳೆದ ಬಾರಿ ಮಳೆ (ಲೆ)ನಾಡು ಕೊಡಗೂ ಸೇರಿದಂತೆ ನಾಡಿನಾದ್ಯಂತ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದಾಗಿ ಈ ಬಾರಿ ಎಲ್ಲೆಲ್ಲೂ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತ ಕಂಡಿದೆ. ಹೀಗಾಗಿ ಕೃಷಿಕರಲ್ಲಿ ಖುಷಿ ಎಂಬುದು ಮರೆಯಾಗಿದ್ದು ಮುಂದೇನು ಎಂಬ ಆತಂಕ ಮನೆ ಮಾಡಿದೆ.

ಕಳೆದ ಬಾರಿ ಹಿಂಗಾರು ಹಾಗೂ ಮುಂಗಾರು ಮಳೆ ಬಾರದ ಕಾರಣ ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು ನೀರಿಲ್ಲದೇ ಬಿಕೋ ಎನ್ನುತ್ತಿದ್ದು ಅಂತರ್ಜಲ ಗಣನೀಯವಾದ ಪ್ರಮಾಣದಲ್ಲಿ ಕುಸಿತ ಗೊಂಡಿದೆ.

ಕೊಡಗು ಜಿಲ್ಲೆಯ ಜೀವ ಜಲದ ಎರಡನೇ ಸಂಗ್ರಹಾಗಾರ ಕುಶಾಲನಗರ ತಾಲೂಕಿನ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ನೀರಿಲ್ಲದೆ ಬರಿದಾಗುತ್ತಿದೆ.

ಕಳೆದ ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಲಾಶಯದಲ್ಲಿ ಸಂಗ್ರಹಣೆಯಾಗಿದ್ದ ನೀರು ಖಾಲಿಯಾಗಿದ್ದು ಜಲಾಶಯದ ತೂಬಿಗೆ ಎಟುಕದಷ್ಟು ಹಿಂದೆ ಸರಿದಿದೆ.

ಕುಶಾಲನಗರದ ದಾಹ

ನೀಗಿಸಿದ್ದ ಜಲಾಶಯ

ಕುಶಾಲನಗರ ಪಟ್ಟಣದ ವಾಸಿಗಳಿಗೆ ಕುಡಿಯುವ ಜೀವ ಜಲ ಪೂರೈಸುತ್ತಿದ್ದ ಕಾವೇರಿ ಕಳೆದ ಹತ್ತು ವರ್ಷಗಳ ಹಿಂದೆ ತನ್ನ ಹರಿವನ್ನು ಸ್ಥಗಿತಗೊಳಿಸಿದ್ದಾಗ ಕುಶಾಲನಗರ ಜಲಮಂಡಳಿ ಚಿಕ್ಲಿಹೊಳೆ ಜಲಾಶಯದಲ್ಲಿ ಸಂಗ್ರಹವಿದ್ದ ನೀರನ್ನು ಕಾವೇರಿ ನದಿಗೆ ಹರಿಸಿ ಕುಶಾಲನಗರದ ಜನರ ದಾಹ ನೀಗಿಸಿತ್ತು. ಆದರೆ, ಈ ಬಾರಿ ಜಲಾಶಯದ ನಿರ್ವಹಣೆಗೂ ಸಾಧ್ಯವಾಗದಷ್ಟು ನೀರು ಕುಸಿತಗೊಂಡಿರುವುದು ಆತಂಕ ಉಂಟು ಮಾಡಿದೆ.

೧೯೮೦ ರ ದಶಕದಲ್ಲಿ ನಿರ್ಮಿಸಿದ್ದ ರಾಜ್ಯ ಸರ್ಕಾರದ ನಿರ್ಲಕ್ಷಿತ ಈ ನೀರಾವರಿ ಯೋಜನೆಯಾದ ಜಲಾಶಯದ ಒಟ್ಟು ಸಾಮರ್ಥ್ಯ ಶೇ.೦.೧೮ ಟಿಎಂಸಿ. ಆದರೆ ಈ ಚಿಕ್ಲಿಹೊಳೆ ಜಲಾಶಯದಲ್ಲಿ ಈಗ ಕೇವಲ ಹತ್ತು ಅಡಿಗಳಷ್ಟು ನೀರಿದ್ದು ಬಿಸಿಲಿನ ತಾಪ ಹೀಗೆಯೇ ಇನ್ನು ಕೆಲವು ದಿನಗಳ ಕಾಲ ಮುಂದುವರೆದರೆ ಈ ಜಲಾಶಯ ಒಣಗಿದ ಕೆರೆಯಂತಾದರೂ ಅಚ್ಚರಿಪಡಬೇಕಿಲ್ಲ.

ಜಲಾಶಯದ ಆಸುಪಾಸಿನ ಕಾಫಿ ತೋಟಗಳಲ್ಲಿ ಬೆಳೆಗಾರರು ಅಳವಡಿಸಿಕೊಂಡಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದರೆ, ಈ ಜಲಾಶಯದ ಒಡಲಿಗೆ ಯಂತ್ರಗಳಿಟ್ಟು

(ಮೊದಲ ಪುಟದಿಂದ) ತೋಟಗಳಿಗೆ ನೀರು ಹಾಯಿಸುವ ಪರಿಪಾಟವಿತ್ತಾದರೂ ಈ ಬಾರಿ ನೀರಿನ ಸಂಗ್ರಹ ಕ್ಷೀಣಗೊಂಡಿರುವ ಕಾರಣ ಬೆಳೆಗಾರರ ಸ್ಥಿತಿಯೂ ಅತಂತ್ರವಾಗಲಿದೆ.

ಮಹಾಶಿವರಾತ್ರಿ ಕಳೆಯುವ ತನಕ ಮಳೆ ಸುರಿಯುವ ಲಕ್ಷಣ ಗೋಚರಿಸುತ್ತಿಲ್ಲ. ಹಾಗಾಗಿ ಚಿಕ್ಲಿಹೊಳೆ ಸೇರಿದಂತೆ ಕೆರೆ ಕಟ್ಟೆಗಳ ಸ್ಥಿತಿ ದೇವರೇ ಗತಿ ಎಂಬAತಾಗಿದೆ.

ಅಂತರ್ಜಲ ತಜ್ಞರ ಮಾಹಿತಿಯಂತೆ ರಾಜ್ಯವನ್ನು ಕಾಡುತ್ತಿರುವ ಭೀಕರ ಬರದಿಂದಾಗಿ ಅಂತರ್ಜಲ ಕುಸಿತವಾಗುತ್ತಿದ್ದು ಕೊಳವೆ ಬಾವಿಗಳನ್ನು ಉಳಿಸಿಕೊಳ್ಳುವುದೇ ಕೃಷಿಕರಿಗೆ ಒಂದು ಸವಾಲಾಗಲಿದೆ.

ರಾಜ್ಯದ ೨೩೬ ತಾಲೂಕುಗಳ ಪೈಕಿ ೨೨೫ ತಾಲೂಕುಗಳಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇನ್ನು ಅಂತರ್ಜಲ ತಜ್ಞರು ತಮ್ಮ ಅಂತರ್ಜಲ ಅಧ್ಯಯನಕ್ಕೆಂದು ರಾಜ್ಯದ ೨೩೬ ತಾಲೂಕುಗಳಲ್ಲಿ ಅಧ್ಯಯನಕ್ಕಾಗಿ ಮೀಸಲಿಟ್ಟಿರುವ ಆಯ್ದ ೧೭೬೪ ಕೊಳವೆ ಬಾವಿಗಳಲ್ಲಿ ಪ್ರತಿ ತಿಂಗಳ ಅಂತರ್ಜಲದ ಅಧ್ಯಯನದಲ್ಲಿ ಆಘಾತಕಾರಿ ಅಂಶ ತಜ್ಞರನ್ನು ಕಾಡುತ್ತಿದೆ.

ಎಲ್ಲಿ ಎಷ್ಟು ಕುಸಿತ

ರಾಜ್ಯ ಸರ್ಕಾರದ ಅಂಕಿ ಅಂಶದ ಪ್ರಕಾರ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಅಂತರ್ಜಲ ೧.೯೩ ಮೀ ಕುಸಿತ ಕಂಡಿದೆ. ಮಂಡ್ಯದಲ್ಲಿ ೮೦೦ ಅಡಿ, ಹಾಸನ ೩.೫೧ ಮೀಟರ್, ವಿಜಯನಗರ ೭೦೦ ಅಡಿ, ರಾಯಚೂರು ೫೦೦ ಅಡಿ, ಕೊಪ್ಪಳ ೪೦೦ ಅಡಿ, ಕಲ್ಬುರ್ಗಿ ೨೩.೭೧ ಮೀ, ಬೆಳಗಾವಿ ೪೪.೩೪ ಮೀ, ಧಾರವಾಡ ೧೦.೩೪ ಮೀ, ವಿಜಯಪುರ ೧೫.೯೦ ಮೀ, ಬಾಗಲಕೋಟೆ ೨೨.೬೮ ಮೀ ಹಾಗೂ ಹಾವೇರಿ ೮.೯೮ ಮೀಟರ್ ಅಂತರ್ಜಲ ಕುಸಿತವಾಗಿದೆ.

೭೦೮೨ ಹಳ್ಳಿಗಳಲ್ಲಿ ಸಂಕಷ್ಟ ಸಾಧ್ಯತೆ

ರಾಜ್ಯ ಸರ್ಕಾರದ ವರದಿಯಂತೆ ರಾಜ್ಯದಲ್ಲಿ ೭೦೮೨ ಹಳ್ಳಿಗಳು ಕುಡಿಯುವ ನೀರಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ರಾಜ್ಯ ಸರ್ಕಾರದಿಂದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರನ್ನು ತ್ವರಿತವಾಗಿ ಪೂರೈಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯದಲ್ಲಿ ೨೬೫೪ ಕೊಳವೆ ಬಾವಿಗಳನ್ನು ಒಪ್ಪಂದಕ್ಕೆ ಪಡೆಯಲು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವರದಿ : ಕೆ.ಎಸ್.ಮೂರ್ತಿ