ಕಣಿವೆ, ಫೆ. ೧೫: ಬಯಲು ಸೀಮೆ ತೊರೆನೂರಿನಲ್ಲಿ ಅರೆನೀರಾವರಿ ಪ್ರದೇಶದಲ್ಲಿ ಕೃಷಿಕರು ಬೆಳೆದ ರಾಗಿ ಫಸಲಿನ ಒಕ್ಕಣೆಯಲ್ಲಿ ಕೃಷಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ.

ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಮಾಡಿದ ಕಣದಲ್ಲಿ ಬಿಸಿಲಿಗೆ ಹರಡಿದ ರಾಗಿ ಹುಲ್ಲಿನ ಮೇಲೆ ಟ್ರಾö್ಯಕ್ಟರ್ ಸಹಾಯದಿಂದ ಅದರ ಟಯರ್‌ಗಳನ್ನು ಹರಿಸಿ ರಾಗಿಯ ಕಟಾವು ಮಾಡಲಾಯಿತು. ಬಳಿಕ ಬೀಸುವ ಗಾಳಿಗೆ ಕಚ್ಚಾ ಸರಕು ತುಂಬಿದ ರಾಗಿಯನ್ನು ತೂರುವ ಮೂಲಕ ಕೃಷಿಕರು ಒಕ್ಕಣೆ ಮಾಡಿಕೊಂಡು ಕಣದಲ್ಲಿಯೇ ರಾಶಿ ಮಾಡಿ ಧಾನ್ಯ ಲಕ್ಷಿö್ಮಯನ್ನು ಪೂಜಿಸಿ ಮನೆಗೆ ಒಯ್ಯಲಾಯಿತು.

ಈ ಸಂದರ್ಭ ಸ್ಥಳಕ್ಕೆ ತೆರಳಿದ್ದ ‘ಶಕ್ತಿ'ಯೊಂದಿಗೆ ಮಾತನಾಡಿದ ಕೃಷಿಕ ಮಹಿಳೆ ಚಿಕ್ಕನಾಯಕನ ಹೊಸಳ್ಳಿಯ ರಂಗಮ್ಮ, ಈ ಬಾರಿ ಮಳೆ ಸರಿಯಾಗಿ ಬೀಳದಿದ್ದರೂ ಕೂಡ ರಾಗಿಯನ್ನು ಬಿತ್ತನೆ ಮಾಡಿ ಸಂಕಷ್ಟದಲ್ಲಿ ರಾಗಿ ಬೆಳೆದೆವು. ಆದರೆ ಸರಿಯಾದ ಬೆಳೆ ಬಾರದ ಕಾರಣ ಇಳುವರಿಯಲ್ಲಿ ಕುಂಠಿತವಾಗಿದೆ. ಈ ಹಿಂದಿನ ವರ್ಷಗಳಲ್ಲಿ ಮನೆಗೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದದ್ದು ಮಾರಾಟ ಮಾಡುತ್ತಿದ್ದೆವು. ಆದರೆ ಈ ಬಾರಿ ಸದ್ಯ ಕೊಂಡುಕೊಳ್ಳುವುದು ತಪ್ಪಿದೆ ಎಂದರು. ನಾವು ರಾಗಿಯನ್ನು ಹೆಚ್ಚಾಗಿ ಸವಿಯುವ ಕಾರಣದಿಂದಲೇ ಬಿಸಿಲು ಬೆಂಕಿಯನ್ನು ಲೆಕ್ಕಿಸದೇ ಹೊಲದಲ್ಲಿ ಸುಡುವ ಬಿಸಿಲಲ್ಲಿ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ರಂಗಮ್ಮ ಹೇಳಿದರು.

- ಕೆ.ಎಸ್. ಮೂರ್ತಿ, ಕಣಿವೆ.