ಸಿದ್ದಾಪುರ, ಫೆ. ೧೫: ಗೊಂದಲ, ಕೋಲಾಹಲ, ವೈಯಕ್ತಿಕ ನಿಂದನೆ, ನೂಕಾಟ, ತಳ್ಳಾಟ, ಸದಸ್ಯರ ನಡುವೆ ಮಾತಿನ ಚಕಮಕಿ, ಕಿರುಚಾಟದೊಂದಿಗೆ ಸಿದ್ದಾಪುರ ಗ್ರಾಮಸಭೆಯು ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆಯಾಗದೇ ಮುಕ್ತಾಯಗೊಂಡಿತು. ಸಿದ್ದಾಪುರ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಗ್ರಾಮಸಭೆಯು ಪಂಚಾಯಿತಿಯ ಅಧ್ಯಕ್ಷೆ ಪ್ರೇಮಾ ಗೋಪಾಲ ಅಧ್ಯಕ್ಷತೆಯಲ್ಲಿ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲೇ ಸಭೆಯಲ್ಲಿ ಗ್ರಾಮಸ್ಥರ ಹಾಗೂ ಗ್ರಾ.ಪಂ. ಸದಸ್ಯರುಗಳ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ಗೂಡಾಯಿತು. ಪೊಲೀಸರ ಮಧ್ಯಪ್ರವೇಶದಿಂದ ಪೊಲೀಸರು ಹರಸಾಹಸಪಟ್ಟು ಸಭೆ ನಡೆಸಲು ಮುಂದಾದ ಪ್ರಸಂಗ ಎದುರಾಯಿತು. ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್, ಗ್ರಾಮಸಭೆಗೆ ನಿಗದಿತ ಸಮಯಕ್ಕೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಲ್ಲೇಶ್‌ರವರು ಸಭೆಗೆ ಗೈರಾದ ಬಗ್ಗೆ ಆಕ್ಷೇಪಿಸಿದರು. ಅಲ್ಲದೆ, ಅಧಿಕಾರಿಯ ವಿರುದ್ಧ ಗಂಭೀರವಾದ ಆರೋಪಗಳಿದ್ದು, ಉದ್ದೇಶಪೂರ್ವಕವಾಗಿ ಗ್ರಾಮಸಭೆಗೆ ಆಗಮಿಸಲಿಲ್ಲ. ಇವರ ವಿರುದ್ಧ ಆರೋಪಗಳಿದ್ದರೂ ಕೂಡ ಮೇಲಾಧಿಕಾರಿಗಳು ಇವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು. ಜಿಲ್ಲಾಧಿಕಾರಿಗಳು ಕೂಡಲೇ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗುಹ್ಯ ಕೂಡುಗದ್ದೆಯ ನಿವಾಸಿ ಎಸ್.ಕೆ. ಅನಿಲ್ ಹಾಗೂ ರೂಪೇಶ್ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರು ವಸತಿ ಯೋಜನೆಯಡಿಯಲ್ಲಿ ಸರ್ಕಾರದ ಅನುದಾನ ಪಡೆದುಕೊಂಡು ನಂತರ ಅಡಿಪಾಯವನ್ನು ಬದಲಾವಣೆ ಮಾಡಿದ್ದಾರೆ. ಇದÀರ ಬಗ್ಗೆ ಕ್ರಮಕೈಗೊಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಅಲ್ಲದೆ, ಅನಿಲ್ ಗ್ರಾಮ ಪಂಚಾಯಿತಿಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಸಭಾಂಗಣದಲ್ಲಿ ಕುಳಿತು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಅನಿಲ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಭೆಯಲ್ಲಿ ಕಿರುಚಾಟ, ನೂಕಾಟವಾಗುತ್ತಿದ್ದರೆ, ಪೊಲೀಸರು ಮಧ್ಯ ಪ್ರವೇಶಿಸಿದರು. ಆದರೂ ಕೂಡ ಕಿರುಚಾಟ, ಆರೋಪ, ಪ್ರತ್ಯಾರೋಪ ಮುಂದುವರಿಯುತ್ತಿತ್ತು. ಪೊಲೀಸರು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು.

ಗ್ರಾಮಸ್ಥರು ಮಾತನಾಡಿ, ಕಳೆದ ಅವಧಿಯ ಅಧ್ಯಕ್ಷರ ಅವಧಿಯ ರೂ. ೧೦ ಲಕ್ಷಕ್ಕೂ ಅಧಿಕ ಸೋಲಾರ್ ಬೀದಿದೀಪಗಳ ಹಗರಣದ ಆರೋಪವಿದ್ದು, ಈ ಬಗ್ಗೆ ತನಿಖೆಯ ವರದಿ ನೀಡುವಂತೆ ಹಾಗೂ ಮಾಹಿತಿ ಒದಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಲ್ಲದೆ, ಗ್ರಾಮ ಪಂಚಾಯಿತಿಯ ಕಚೇರಿ ಎದುರು ಇದ್ದಂತಹ ಹಳೇ ಕಾಲದ ತೆರೆದ ಬಾವಿಯಿದ್ದು, ಮುಚ್ಚಿರುವುದನ್ನು ಮತ್ತೆ ತರೆಯಬೇಕು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸಮ್ಮದ್ ಮಾತನಾಡಿ, ವೀರಾಜಪೇಟೆ ರಸ್ತೆ ಸಮೀಪದಲ್ಲಿ ಅಮೃತ ಕೆರೆಯ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಯಂತ್ರ ಬಳಸಿಕೊಂಡು ಕಾಮಗಾರಿ ಮಾಡಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಬಷೀರ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಾಗಗಳಿದ್ದು, ಈ ಜಾಗದ ಬಗ್ಗೆ ಕಂದಾಯ ಇಲಾಖೆಗೆ ಹಲವಾರು ಬಾರಿ ಮಾಹಿತಿ ನೀಡಿ, ಗುರುತಿಸಿಕೊಟ್ಟಿದ್ದರೂ ಕೂಡ ಖಾಸಗಿ ವ್ಯಕ್ತಿಗಳಿಂದ ತೆರವುಗೊಳಿಸದೇ ನಿರ್ಲಕ್ಷö್ಯ ವಹಿಸಲಾಗಿದೆ ಎಂದು ಆರೋಪಿಸಿದರು. ಕಸ ವಿಲೇವಾರಿಗೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಜಾಗವನ್ನು ಗುರುತಿಸುವಂತೆ ಆಗ್ರಹಪಡಿಸಿದರು. ಪ್ರವೀಣ್ ಮಾತನಾಡಿ, ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ಇದಲ್ಲದೇ ಶಾಲೆಗಳ ಬಳಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸದೇ ಇರುವ ಹಿನ್ನೆಲೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಶಾಲೆಗಳು ಬಿಡುವ ಸಂದರ್ಭದಲ್ಲಿ ಕೆಲವು ಯುವಕರುಗಳು ಅನಗತ್ಯವಾಗಿ ಬಸ್ಸು ನಿಲ್ದಾಣ ಸೇರಿದಂತೆ ಪಟ್ಟಣಗಳಲ್ಲಿ ಸುತ್ತಾಡುತ್ತಿದ್ದಾರೆ. ಕೆಲವು ಆಟೋ ಚಾಲಕರು ಪರವಾನಗಿ ಇಲ್ಲದೇ ವಾಹನ ಚಾಲಿಸುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಕರಡಿಗೋಡು ಗ್ರಾಮದ ನಿವಾಸಿ ಬೈಜು ಮಾತನಾಡಿ, ೨೦೧೮ರ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಈವರೆಗೂ ಪುನರ್ವಸತಿಗೆ ಜಾಗವನ್ನು ಗುರುತಿಸಿಲ್ಲ. ಭರವಸೆಗಳನ್ನು ನೀಡುತ್ತಾ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶುಕೂರು ಮಾತನಾಡಿ, ತನ್ನ ವಾರ್ಡ್ನಲ್ಲಿ ತನ್ನ ಗಮನಕ್ಕೆ ತರದೇ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ೮ ವಿಶೇಷ ಚೇತನರ ಮನೆಗಳ ಬಳಿ ಮಡಿಕೇರಿ ರಸ್ತೆಯಲ್ಲಿ ಸೋಲಾರ್ ಅಳವಡಿಸಲಾಗಿದೆ ಎಂದು ಬಿಲ್ ಪಡೆದುಕೊಂಡಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದರು.

ರಮೇಶ್ ಮಾತನಾಡಿ, ಸಿದ್ದಾಪುರ ಭಾಗದ ಮಾಂಸ ವ್ಯಾಪಾರಿಗಳು ಕೋಳಿ ಮಾಂಸವನ್ನು ಅಧಿಕ ದರಗಳಿಗೆ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಸಮಸ್ಯೆ ಆಗಿರುತ್ತದೆಂದರು. ಇತರ ಊರುಗಳಲ್ಲಿ ಕಡಿಮೆ ದರ ಇದ್ದರೂ ಕೂಡ ಈ ಭಾಗದಲ್ಲಿ ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎಂದು ಗಮನ ಸೆಳೆದರು. ಸ್ಥಳೀಯರು ಮಾತನಾಡಿ, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಆವರಣದೊಳಗೆ ವಾಹನಗಳನ್ನು ನಿಲ್ಲಿಸಿ ಹೊರ ಊರಿಗೆ ತೆರಳುತ್ತಿದ್ದು, ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಬಾರದೆಂದು ತಿಳಿಸಿದರು.

ಅಂಬೇಡ್ಕರ್ ನಗರದ ನಿವಾಸಿಯಾಗಿರುವ ರವಿ ಮಾತನಾಡಿ, ಸಿದ್ದಾಪುರ ಪಟ್ಟಣದಲ್ಲಿ ಡಾ|| ಅಂಬೇಡ್ಕರ್‌ರವರ ಪ್ರತಿಮೆ ನಿರ್ಮಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಪಿಡಿಓ ಸೆಫೀಕ್ ಹಾಗೂ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

ಇಂದಿನ ಗ್ರಾಮಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರು ಚರ್ಚಿಸದೇ ಕೇವಲ ವೈಯಕ್ತಿಕ ಆರೋಪ - ಪ್ರತ್ಯಾರೋಪ, ಏಕವಚನದಲ್ಲಿ ನಿಂದನೆ ಮಾಡುತ್ತಾ ಸಭೆಯ ಸಮಯವನ್ನು ವ್ಯರ್ಥಗೊಳಿಸಿದರು. ಸದಾ ಸುದ್ದಿಯಲ್ಲಿರುವ ಪಂಚಾಯಿತಿಯ ಗ್ರಾಮ ಸಭೆಗೆ ಆಗಮಿಸಿದ ದೂರದ ನಿವಾಸಿಗಳಿಗೆ ಪುಕ್ಕಟೆ ಮನೋರಂಜನೆ ನೀಡಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಳನಿ ಸ್ವಾಮಿ ಹಾಗೂ ಪಿಡಿಓ ಸೆಫೀಕ್ ಹಾಜರಿದ್ದರು. -ವಾಸು