ವೀರಾಜಪೇಟೆ, ಫೆ. ೧೫: ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ಯುವಕ ಸಂಘ ಇವರ ವತಿಯಿಂದ ಬಗರ್ ಹುಕುಂ ಅಕ್ರಮ ಸಕ್ರಮ ಸಮಿತಿಯ ನೂತನ ತಾಲೂಕು ಅದ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರು ಹಾಕುವ ಮೂಲಕ ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ ಮಾತನಾಡಿ ಈ ಭಾಗದ ವ್ಯಕ್ತಿಗೆ ಜವಬ್ದಾರಿ ಸ್ಥಾನ ಸಿಕ್ಕಿರುವುದು ಸಂತೋಷದ ವಿಷಯ ಮತ್ತು ಕಲ್ಲುಬಾಯ್ಸ್ ತಂಡದ ವತಿಯಿಂದ ತಾವು ಹುಟ್ಟಿದ ಪ್ರದೇಶದಲ್ಲಿ ಸನ್ಮಾನ ಮಾಡಿ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಚಾರ. ಕಡು ಬಡವರು ಸರಕಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿದಾರೆ. ಆದರೆ ಅವರಿಗೆ ಇಂದಿಗೂ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಸಮಿತಿ ಮೂಲಕ ಅಕ್ರಮವಾಗಿರುವುದನ್ನು ಸಕ್ರಮಗೊಳಿಸಲು ಈ ಸಮಿತಿ ಇದೆ. ಇದನ್ನು ಕಡುಬಡವರು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವೀರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಸಾಹಿತಿಗಳಾದ ರಜಿತ ಕಾರ್ಯಪ್ಪ ಮಾತನಾಡಿ, ರಾಜ್ಯ ಸರ್ಕಾರದ ಕಂದಾಯ ಸಚಿವರ ಸೂಚನೆಯಂತೆ ಅಕ್ರಮ ಸಕ್ರಮ ಸಮಿತಿ ರಚನೆ ಮಾಡಿರುವುದು ಶ್ಲಾಘನೀಯ. ಸರಕಾರಿ ಜಾಗದಲ್ಲಿ ವಾಸಿಸುತ್ತಿರುವ ಅನೇಕ ಕಡುಬಡವರು ತುಂಡು ಭೂಮಿಯ ಹಕ್ಕನ್ನು ಹೊಂದಿಲ್ಲದೆ ಇರುವುದು ವಿಷಾದನೀಯ. ಅವರಿಗೆ ನೂತನ ಅಧ್ಯಕ್ಷರ ಮೂಲಕ ಭೂಮಿ ಹಕ್ಕನ್ನು ಪಡೆದುಕೊಳ್ಳುವಂತಾಗಲಿ, ಇದೀಗ ನೂತನ ಅಧ್ಯಕ್ಷರ ಕಚೇರಿಯನ್ನು ಕೂಡ ಆರಂಭಿಸಲಾಗಿದ್ದು ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದರಲ್ಲದೆ ನಮ್ಮ ಗ್ರಾಮದವರೇ ಆದ ಸಲಾಂ ಅವರಿಗೆ ಅಧ್ಯಕ್ಷ ಗಿರಿ ದೊರಕಿರುವುದು ಅಭಿನಂದನಾರ್ಹ ಎಂದರು.

ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಬಷೀರ್ ಮಾತನಾಡಿ, ಈ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮತ್ತು ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ, ಶಾಸಕರ ಗಮನಕ್ಕೆ ಇದರ ಬಗ್ಗೆ ಮಾಹಿತಿ ನೀಡಿ ಆದಷ್ಟು ಬೇಗನೇ ಈ ಕೆಲಸವನ್ನು ಮಾಡಿಸಿಕೊಡುವಂತೆ ನಾಗರಿಕರ ಪರವಾಗಿ ಸಲಾಂ ಅವರಲ್ಲಿ ಮನವಿ ಮಾಡಿದರು. ಪುರಸಭೆ ಸದಸ್ಯರಾದ ಮತೀನ್ ಮಾತನಾಡಿ, ಸಲಾಂ ಒಬ್ಬ ಉತ್ತಮ ಕಾರ್ಯಕರ್ತ ಅವರು ಎಲ್ಲರ ಜೊತೆಯಲ್ಲಿ ಬೆರೆತು ಬಾಳುವ ವ್ಯಕ್ತಿ ಅದನ್ನು ಗುರುತಿಸಿ ಶಾಸಕರು ಅವರಿಗೆ ಈ ಜವಾಬ್ದಾರಿ ನೀಡಿದ್ದಾರೆ ಅವರು ಈ ಸ್ಥಾನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ ಎಂದು ಸಂಪೂರ್ಣ ಭರವಸೆ ಇದೆ ಎಂದು ತಿಳಿಸಿದರು. ವೀರಾಜಪೇಟೆ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಜಿ. ಮೋಹನ್ ಮಾತನಾಡಿ, ಬಡವರಿಗೆ ದೀನ ದಲಿತರಿಗೆ ಉಪಯೋಗ ಆಗುವಂತಾಗಲಿ ಎಂದು ಆಶಿಸಿದರು. ಆರ್ಜಿ ಗ್ರಾ.ಪಂ. ಅಧ್ಯಕ್ಷೆ ಫಾತಿಮಾ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಕೆ. ಸಲಾಂ ಅವರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ನನಗೆ ಈ ಜವಾಬ್ದಾರಿಯ ಸ್ಥಾನ ನೀಡಿದ್ದಾರೆ, ಅವರ ಹೆಸರಿಗೆ ಯಾವುದೇ ಕಪುö್ಪ ಚುಕ್ಕೆ ಬಾರದ ರೀತಿಯಲ್ಲಿ ಅವರ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಸಲಾಂ ಅವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಕಲುಬಾಯ್ಸ್ ತಂಡದ ಅಧ್ಯಕ್ಷ ರಹೀಂ, ಮಾಜಿ ಗ್ರಾ.ಪಂ. ಸದಸ್ಯ ಜಾಫರ್, ಕಲ್ಲಬಾಣೆಯ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲ್ಲುಬಾಣೆಯ ನಾಗರಿಕರು, ಕಲುಬಾಯ್ಸ್ ತಂಡದ ಸದಸ್ಯರು ಇದ್ದರು.