ಗೋಣಿಕೊಪ್ಪಲು, ಫೆ. ೧೫: ಮಾರ್ಚ್ ತಿಂಗಳ ೩ರಿಂದ ೬ನೇ ತಾರೀಖಿನವರೆಗೆ ನಡೆಯುವ ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವಂತೆ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಕೆ.ರಾಮಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೀರಾಜಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ಮಹತ್ವಪೂರ್ಣ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಶೇ.೧೦೦ರ ಫಲಿತಾಂಶದಲ್ಲಿ ಗುರಿಮುಟ್ಟಬೇಕಾಗಿದೆ. ಇದರಿಂದ ನಮ್ಮ ಕೆಲಸದಲ್ಲಿ ನೆಮ್ಮದಿ ಸಿಗಲಿದೆ. ಕೇವಲ ಸರ್ಕಾರಿ ಕಾರ್ಯಕ್ರಮವೆಂದು ಯಾವುದೇ ಅಧಿಕಾರಿಗಳು ಭಾವಿಸಬಾರದು. ಇದರಿಂದ ನಾವು ಮಾಡಿದ ಕೆಲಸ ಶೇ.೧೦೦ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಇದರಿಂದ ನಾವು ಸಮಾಜಕ್ಕೆ ವಂಚನೆ ಮಾಡಿದಂತಾಗುತ್ತದೆ. ತಾಲೂಕು ಆಡಳಿತ ವತಿಯಿಂದ ಎಲ್ಲಾ ಇಲಾಖೆಗಳು ಒಟ್ಟಾಗಿ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಇದರಿಂದ ಮಕ್ಕಳ ಅರೋಗ್ಯಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡೋಣ. ಸಂವಿಧಾನದ ಮೂಲ ಆಶಯವು ಇದಾಗಿದೆ. ತಾಲೂಕು ಆಡಳಿತಕ್ಕೆ ಉತ್ತಮ ರೀತಿಯ ಸಲಹೆ ಸೂಚನೆಗಳು ನೀಡಲು ಮುಕ್ತ ಅವಕಾಶವಿದೆ. ಮಾ.೩ರಂದು ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಎಲ್ಲಾ ಬೂತ್‌ಗಳಲ್ಲಿಯೂ ಪಲ್ಸ್ ಪೋಲಿಯೋ ಯಶಸ್ವಿಗೊಳಿಸಲು ಶ್ರಮಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಮನವಿ ಮಾಡಿದರು.

ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಮಾತನಾಡಿ, ೫ ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲೀಯೊ ಲಸಿಕಾ ಕಾರ್ಯಕ್ರಮವು ನಿಗದಿತ ಸಮಯದಲ್ಲಿ ನಡೆಯಲಿದೆ. ತಾಲೂಕಿನ ೧೯೬ ಬೂತ್‌ಗಳಲ್ಲಿ ಏಕ ಕಾಲಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ೭೬೮ ಲಸಿಕೆದಾರರು ಕೆಲಸ ನಿರ್ವಹಿಸಲಿದ್ದು ಇವರನ್ನು ೩೫ ಮೇಲ್ವಿಚಾರಕರು ನಿರ್ವಹಣೆ ಮಾಡಲಿದ್ದಾರೆ. ೩೭೬ ತಂಡಗಳು ಮನೆ ಭೇಟಿ ನೀಡಲಿದ್ದಾರೆ. ೫೦೦೧೩ ಮನೆಗಳಿವೆ. ಇವುಗಳಲ್ಲಿ ನಗರ ಪ್ರದೇಶದ ಮಕ್ಕಳು ೧೫೭೬ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೧೩೪೯೪ ಮಕ್ಕಳಿದ್ದಾರೆ. ಒಟ್ಟು ವಲಸೆ ಹಾಗೂ ಸ್ಥಿರ ವಾಸಿತ, ವಲಸಿಗ ಜನಸಂಖ್ಯೆಯು ೨೧೨೯೫೯ಗಳಿರುತ್ತವೆ ಎಂದು ಮಾಹಿತಿ ಒದಗಿಸಿದರು.

ಪ್ರಮುಖವಾಗಿ ಬಸ್ ನಿಲ್ದಾಣ, ಜನನಿಬೀಡ ಪ್ರದೇಶ, ಚೆಕ್ ಪೋಸ್ಟ್ಗಳಲ್ಲಿ ಲಿಸಿಕಾ ಕಾರ್ಯಕ್ರಮವು ನಡೆಯಲಿದೆ. ನಂತರ ಮನೆ ಮನೆ ಭೇಟಿಯು ನೀಡಲಿದ್ದಾರೆ. ಕೆಲವು ಶಾಲಾ ಕೊಠಡಿಗಳಲ್ಲಿ ಲಸಿಕಾ ಕೇಂದ್ರ ತೆರೆಯಲಾಗುವುದು ಕೇಂದ್ರವನ್ನು ಸಜ್ಜು ಗೊಳಿಸಿ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಎಲ್ಲಾ ಇಲಾಖೆಯ ಅಧಿಕಾರಿಗಳು ಕೈ ಜೋಡಿಸುವ ಮೂಲಕ ತಾಲೂಕಿನಲ್ಲಿ ಪೋಲಿಯೋ ಯಶಸ್ವಿಗೊಳಿಸಲು ಮನವಿ ಮಾಡಿದರು.

ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳು ಶಶಿಕಾಂತ್ ಎಂ.ಪಿ, ತಾಲೂಕು ಹಿರಿಯ ಫ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಕಾವೇರಮ್ಮ, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.