ಮಡಿಕೇರಿ, ಫೆ. ೧೫: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ಸತ್ಯವತಿ ವಿಜಯರಾಘವ ಚಾರಿಟೆಬಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಬರಹಗಾರರಾದ ಕೊಡಗು ಜಿಲ್ಲೆಯ ಕುಶಾಲನಗರದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಮೈಸೂರಿನ ಎ. ಪುಷ್ಪಾ ಅಯ್ಯಂಗಾರ್ ಈ ದತ್ತಿ ಸ್ಥಾಪಿಸಿದ್ದಾರೆ. ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳಾ ಸಮಸ್ಯೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ್ದಾರೆ.

‘ಕಾಡು ಹಕ್ಕಿಯ ಹಾಡು’, ‘ಕಾಡಿದ ನೆನಪುಗಳು’, ‘ಕನವರಿಕೆ’, ‘ಒಡಲ ಉರಿ’ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರೊಂದಿಗೆ ಕೋಲಾರದ ಅಮರೇಂದ್ರ ಹೊಲ್ಲಂಬಳ್ಳಿ ಅವರೂ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.