ಗೋಣಿಕೊಪ್ಪಲು, ಫೆ. ೧೫: ಕಳೆದ ೨೨ ವರ್ಷಗಳಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿ ಕಾಡುತ್ತಿದ್ದ ಕುಟ್ಟಂದಿ, ಗುಡ್ಡಮಾಡು, ಬಿ.ಶೆಟ್ಟಿಗೇರಿ ಸಂಪರ್ಕ ರಸ್ತೆಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅನುದಾನ ವನ್ನು ಬಿಡುಗಡೆಗೊಳಿಸಿದ್ದು ರಸ್ತೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ.

ರಸ್ತೆಯ ಇಕ್ಕೆಲಗಳನ್ನು ಅಗಲೀಕರಣಗೊಳಿಸಿ, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಬದಲಾವಣೆಗೊಳಿಸಿ ರಸ್ತೆಯಲ್ಲಿ ವಾಹನ ಸಂಚಾರವು ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಉಮೇಶ್ ಕೇಚಮಯ್ಯ ಹಾಗೂ ಗ್ರಾಮದ ಪ್ರಮುಖರು ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.

ಕಳೆದ ೨೨ ವರ್ಷಗಳ ಹಿಂದೆ ರಸ್ತೆ ನಿರ್ಮಾಣವಾಗಿತ್ತು. ಈ ಪ್ರದೇಶದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗಿರಲಿಲ್ಲ. ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಗ್ರಾಮಸ್ಥರು ಮನವಿಗಳನ್ನು ನೀಡಿದ್ದರೂ ರಸ್ತೆ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಆಯ್ಕೆಯಾದ ನಂತರ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಈ ಭಾಗದ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಗೆ ಸ್ಪಂದನೆ ನೀಡಿದ್ದಾರೆ.

ರಸ್ತೆ ಕಾಮಗಾರಿಯ ಗುಣಮಟ್ಟ ವನ್ನು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ ಹಾಗೂ ಗ್ರಾಮಸ್ಥರು ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಬೋಪಣ್ಣ, ರಸ್ತೆ ಸಮಸ್ಯೆಯಿಂದಾಗಿ ಇಲ್ಲಿನ ನಾಗರಿಕರು ನಿರಂತರ ಸಮಸ್ಯೆ ಎದುರಿಸುತ್ತಿದ್ದರು. ವಾಹನ ಸಂಚಾರಕ್ಕೆ ಬಾರಿ ತೊಂದರೆ ಎದುರಾಗಿತ್ತು. ಇದೀಗ ಕ್ಷೇತ್ರದ ಶಾಸಕ ಪೊನ್ನಣ್ಣನವರನ್ನು ಗಮನ ಸೆಳೆದಾಗÀ ಮೊದಲ ಆದ್ಯತೆಯಾಗಿ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆ ಕಾಮಗಾರಿ ನಡೆಯುತ್ತಿದೆ.

ಗ್ರಾಮದಲ್ಲಿ ಬಹಳಷ್ಟು ರಸ್ತೆಗಳಿಗೆ ಕಾಯಕಲ್ಪ ನೀಡಲಾಗಿದೆ. ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ನಡೆದಿರುವುದು ಉತ್ತಮ ಬೆಳವಣಿಗೆ. ಈ ಭಾಗದಲ್ಲಿ ಹೆಚ್ಚಾಗಿ ಮಳೆ ಸುರಿಯುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಹೀಗಾಗಿ ಗುಣಮಟ್ಟದ ರಸ್ತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮಸ್ಥರು ಖುದ್ದಾಗಿ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಳಪೆ ಕಾಮಗಾರಿ ಆಗದಂತೆ ಎಚ್ಚರ ವಹಿಸಿದ್ದಾರೆ ಎಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಶಾಸಕರಾಗಿ ೮ ತಿಂಗಳು ಮಾತ್ರ ಕಳೆದಿವೆ. ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಅಭಿವೃದ್ಧಿ ಕಾರ್ಯಗಳಾದ ರಸ್ತೆ, ತಡೆಗೋಡೆ, ಸೇತುವೆ ಸೇರಿದಂತೆ ಇನ್ನಿತರ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷದ ಕೆಲವು ಮುಖಂಡರು ಶಾಸಕ ಪೊನ್ನಣ್ಣನವರ ಮೇಲೆ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ಶ್ವೇತಪತ್ರ ನೀಡುವಂತೆ ಹೇಳಿಕೆ ನೀಡುತ್ತಿದ್ದಾರೆ. ಕುಗ್ರಾಮವಾಗಿರುವ ಬಿ.ಶೆಟ್ಟಿಗೇರಿ ಪಂಚಾಯಿತಿಯಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು ಯಾವ ಮಟ್ಟದಲ್ಲಿ ಇದೆ ಎಂದು ಖುದ್ದಾಗಿ ನೋಡಬಹುದಾಗಿದೆ. ಶ್ವೇತ ಪತ್ರಕ್ಕೆ ಒತ್ತಾಯಿಸುವವರು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಆಗಮಿಸಿ ಪರಿಶೀಲನೆ ನಡೆಸಲಿ ಎಂದು ಬೋಪಣ್ಣ ಈ ಸಂದರ್ಭ ಹೇಳಿದರು.