ಮಡಿಕೇರಿ, ಫೆ. ೧೫: ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಾದ ಮಸೀದಿ, ದರ್ಗಾ, ಮದರಸಗಳನ್ನು ರಕ್ಷಣೆ ಮಾಡಬೇಕು ಎಂಬ ಆಗ್ರಹದೊಂದಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಸ್ಲಿಂ ಜಮಾಅತ್‌ಗಳ ಒಕ್ಕೂಟದ ವತಿಯಿಂದ ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

ಬಾಬರಿ ಮಸೀದಿಯನ್ನು ಕೆಡವಿದ ನಂತರ ಇದೀಗ ಜ್ಞಾನವ್ಯಾಪಿ, ಕಾಶಿ, ಮಥುರಾಗಳಲ್ಲಿರುವ ಮಸೀದಿಗಳ ವಿರುದ್ಧ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾ ಕಾರರು ೧೯೯೧ರ ಧಾರ್ಮಿಕ ಆಚರಣೆ ಸ್ಥಳದ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಮಸೀದಿ, ದರ್ಗಾ, ಮದರಸಗಳನ್ನು ಸರ್ಕಾರ ರಕ್ಷಿಸಬೇಕೆಂದು ಒತ್ತಾಯಿಸಿ ದರು. ವಕ್ಫ್ಗೆ ಸೇರಿದ ಆಸ್ತಿಗಳು ಒತ್ತುವರಿಯಾಗುತ್ತಿವೆ ಎಂದು ಆಪಾದಿಸಿದ ಪ್ರತಿಭಟನಾಕಾರರು, ಕೂಡಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ವಕ್ಫ್ ಬೋರ್ಡಿನ ಸಭೆ ಕರೆದು ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಸರ್ಕಾರಿ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.೮ ಮೀಸಲಾತಿ ಯನ್ನು ನಿಗದಿಮಾಡಬೇಕು; ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದ ಅಭಿವೃದ್ಧಿಗಾಗಿ ಹತ್ತು ಸಾವಿರ ಕೋಟಿ ಹಣ ಮೀಸಲಿಡಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು. ಕುಶಾಲನಗರದಲ್ಲಿ ಹತ್ಯೆಗೀಡಾದ ಮಡಿಕೇರಿಯ ಸದಿದ್ ಕುಟುಂಬಕ್ಕೆ ರಾಜ್ಯ ಸರ್ಕಾರ ಹತ್ತು ಲಕ್ಷ ಪರಿಹಾರ ನೀಡುವುದರ ಜೊತೆಗೆ ಆತನ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಮನವಿ ಮಾಡಿದರು.

(ಮೊದಲ ಪುಟದಿಂದ) ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲೇಖಕ ಶಿವ ಸುಂದರ್ ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜನರನ್ನು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದು, ದೆಹಲಿಯಲ್ಲಿ ರೈತರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರೆ ಅವರ ಮೇಲೂ ಸರ್ಕಾರ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಉಳಿಸುವುದಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಜಮಾಅತ್‌ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಮಿನ್ ಮೊಯ್ಸಿನ್ ಮಾತನಾಡಿ, ಕೇಂದ್ರ ಸರ್ಕಾರದ ಕಾನೂನು ಬಾಹಿರ ಚಿಂತನೆಗಳ ವಿರುದ್ಧ ರಾಜ್ಯ ಸರ್ಕಾರ ಸದನದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದರು. ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಸ್ಲಿಂ ಜಮಾಅತ್‌ಗಳ ಒಕ್ಕೂಟದ ಅಧ್ಯಕ್ಷ ನಜೀರ್ ಅಹ್ಮದ್, ಉಪಾಧ್ಯಕ್ಷ ಫಯಾಜ್ ಶಾಹಿನ್ಯ, ಕಾರ್ಯದರ್ಶಿ ಇಮ್ರಾನ್, ಮಕ್ಕಾ ಮಸೀದಿ ಧರ್ಮಗುರು ಹಕೀಮ್ ಸಾಬ್, ಮದೀನಾ ಮಸೀದಿ ಅಧ್ಯಕ್ಷ ಮುಕ್ತಾರ್, ಲಷ್ಕರ್ ಮಸೀದಿ ಅಧ್ಯಕ್ಷ ಇದಾಯತ್, ಸಲಫಿ ಮಸೀದಿ ಅಧ್ಯಕ್ಷ ಉನೈಸ್, ಮಸ್ಜಿದ್ ಹಲೀಮಾ ಅಧ್ಯಕ್ಷ ನಜೀರ್, ಮಸ್ಜಿದ್ ರಹ್ಮಾ ಅಧ್ಯಕ್ಷ ಅಪ್ಸರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯರುಗಳಾದ ಮನ್ಸೂರ್, ಬಷೀರ್ ಅಹ್ಮದ್, ಎಂ.ಎA. ಜಮಾಅತ್‌ನ ಹಾರೂನ್, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್, ಡಿಸಿಸಿ ಸದಸ್ಯ ಕಲೀಲ್ ಭಾಷಾ ಮತ್ತಿತರರು ಪಾಲ್ಗೊಂಡಿದ್ದರು.