*ಸಿದ್ದಾಪುರ, ಫೆ. ೧೫: ಕೊಡಗು ಜಿಲ್ಲೆಯಲ್ಲಿ ಯೋಜನೆಗಳು ರೂಪು ಗೊಳ್ಳುತ್ತವೆ, ಕಾಮಗಾರಿಗಳು ಆರಂ ಭಗೊಳ್ಳುತ್ತವೆ. ಆದರೆ ಪೂರ್ಣ ಗೊಳ್ಳುವುದಿಲ್ಲ, ಇದೇ ಕಾರಣಕ್ಕೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಸುಮಾರು ೭ ವರ್ಷಗಳ ಹಿಂದೆ ನಿರ್ಮಾಣವಾದ ಸಿದ್ದಾಪುರದ ಸರ್ಕಾರಿ ಅತಿಥಿಗೃಹ.

ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಮೈಸೂರು ರಸ್ತೆಯ ಭಾಗದಲ್ಲಿ ಬ್ರಿಟಿಷರ ಕಾಲದ ಒಂದು ಹಳೆಯ ಕಟ್ಟಡವಿತ್ತು. ಇಲ್ಲಿ ಹಲವು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಗ್ಯಾಂಗ್‌ಮೆನ್‌ಗಳು ಆಶ್ರಯ ಪಡೆದಿದ್ದರು. ಕ್ರಮೇಣ ಗ್ಯಾಂಗ್‌ಮೆನ್ ಸೇವೆ ರದ್ದಾಗಿ ಈ ಕಟ್ಟಡ ಪಾಳು ಬಿದ್ದಿತ್ತು.

ಲೋಕೋಪಯೋಗಿ ಇಲಾಖೆಗೆ ಸೇರಿದ ಹಳೆಯ ಕಟ್ಟಡವಿರುವ ಜಾಗದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅನುಕೂಲ ವಾಗುವಂತೆ ಅತಿಥಿಗೃಹವೊಂದು ನಿರ್ಮಾಣಗೊಂಡರೆ ಉತ್ತಮ ಎನ್ನುವ ಅಭಿಪ್ರಾಯ ಅಂದು ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಸ್ಥಳೀಯ ಬಿಜೆಪಿ ಮಾಜಿ ಅಧ್ಯಕ್ಷ ದೇವಣಿರ ಸುಜಯ್ ಹಾಗೂ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಹರಿದಾಸ್ ಕರಡಿಗೋಡು ಅವರು ಅಂದಿನ ಶಾಸಕ ಕೆ.ಜಿ.ಬೋಪಯ್ಯ ಅವರ ಮೇಲೆ ಒತ್ತಡ ಹೇರಿ ಅತಿಥಿಗೃಹ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಸುಮಾರು ೫೦ ಲಕ್ಷ ರೂ. ವೆಚ್ಚದ ಅತಿಥಿಗೃಹದ ಯೋಜನೆಗೆ ಹಣದ ಕೊರತೆ ಇದ್ದ ಕಾರಣ ಬೋಪಯ್ಯ ಅವರು ಅಂದು ರಾಜ್ಯಸಭಾ ಸದಸ್ಯರಾಗಿದ್ದ ವೆಂಕಯ್ಯನಾಯ್ಡು ಅವರಿಂದ ಅನುದಾನವನ್ನು ಕೋರಿದರು. ಮೊದಲ ಹಂತದಲ್ಲಿ ೩೫ ಲಕ್ಷ ರೂ.ಗಳು ಬಿಡುಗಡೆಯಾಗಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಹೆಚ್ಚುವರಿ ಅನುದಾನದ ಅಗತ್ಯವಿತ್ತು. ಮತ್ತೆ ವೆಂಕಯ್ಯನಾಯ್ಡು ಅವರೇ ರೂ.೧೫ ಲಕ್ಷವನ್ನು ಬಿಡುಗಡೆ ಮಾಡಿದ್ದರು. ಹೀಗೆ ಒಟ್ಟು ೫೦ ಲಕ್ಷ ರೂ. ವೆಚ್ಚದ ಕಟ್ಟಡ ನಿರ್ಮಾಣ ೭ವರ್ಷಗಳ ಹಿಂದೆಯೇ ಪೂರ್ಣ ಗೊಂಡಿತು. ಆದರೆ ಇಲ್ಲಿಯವರೆಗೆ ಈ ಅತಿಥಿಗೃಹ ಸರ್ಕಾರಿ ಅಧಿಕಾರಿಗಳ ಉಪಯೋಗಕ್ಕೆ ಲಭಿಸಿಲ್ಲ, ಅಲ್ಲದೆ ಉದ್ಘಾಟನೆಯ ಭಾಗ್ಯವನ್ನೇ ಕಂಡಿಲ್ಲ.

ಕಟ್ಟಡದ ಪಕ್ಕದಲ್ಲೇ ಮಳೆ ಮಾಪನಾ ಕೇಂದ್ರವೂ ಇದೆ, ಆದರೆ ಇದು ಕೂಡ ನಿಷ್ಪçಯೋಜಕವಾಗಿದೆ. ಅತಿಥಿಗೃಹದ ಕಟ್ಟಡ ಕಾಡುಪಾಲಾಗಿದ್ದು, ಅನುದಾನ ಪೋಲಾಗಿದೆ. ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾ ಗಿದೆಯೋ ಆ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.

- ಅಂಚೆಮನೆ ಸುಧಿ