ಮಡಿಕೇರಿ, ಫೆ. ೧೭: ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳು ಹಾಗೂ ಔಷಧಿಗಳ ಕೊರತೆ ಕಂಡುಬರುತ್ತಿದ್ದು, ಕೂಡಲೇ ಸಿಬ್ಬಂದಿಗಳ ನೇಮಕಾತಿಯೊಂದಿಗೆ ಅಗತ್ಯ ಔಷಧಿಗಳನ್ನು ಒದಗಿಸಬೇಕೆಂದು ಬಹುಜನ ಸಮಾಜ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಳಪಡುವ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಅಧೀನದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಶಕಿಯರ ಕೊರತೆ ಇದೆ. ಕರ್ತವ್ಯದಲ್ಲಿರುವ ಶುಶ್ರೂಶಕಿಯರು ಹಗಲು-ರಾತ್ರಿ ಕೆಲಸ ಮಾಡುವಂತಹ ಪರಿಸ್ಥಿತಿ ಕಂಡು ಬರುತ್ತಿದೆ. ಅಲ್ಲದೆ, ಕೇಂದ್ರಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಕೂಡ ಇದೆ. ಗ್ರಾಮಗಳಲ್ಲಿ ಔಷಧಿ ಅಂಗಡಿಗಳೂ ಕೂಡ ಇಲ್ಲದಿರುವದರಿಂದ ಕೇಂದ್ರಗಳಿಗೆ ಬರುವ ರೋಗಿಗಳು ಔಷಧಿಗಾಗಿ ಮತ್ತೆ ಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಎಲ್ಲ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ನೇಮಕಾತಿ ಮಾಡಿ, ಔಷಧಿ ಒದಗಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜ ಹಾಗೂ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್‌ಕುಮಾರ್, ಕೊಡಗು ಜಿಲ್ಲಾ ಉಸ್ತುವಾರಿ ಕಳ್ಳೀರ ಹರಿಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌರಿರ ದೇವಯ್ಯ, ಪದಾಧಿಕಾರಿಗಳು ಇದ್ದರು.