ಕೊಡ್ಲಿಪೇಟೆ, ಫೆ. ೧೬: ಮಣ್ಣಿನ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಕೃಷಿಯಲ್ಲಿ ಲಾಭ ಕಂಡುಕೊಳ್ಳಬಹುದು ಎಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಮಣ್ಣು ಪರೀಕ್ಷಾ ವಿಜ್ಞಾನಿ ಡಾ. ನಡಾಫ್ ಸಲಹೆ ನೀಡಿದರು. ಕಾಫಿ ಮಂಡಳಿ ಆಶ್ರಯದಲ್ಲಿ ಇಲ್ಲಿನ ಹೇಮಾವತಿ ರೋಟರಿ ಸಂಸ್ಥೆ ಮತ್ತು ಪ್ಲಾಂಟರ್ಸ್ ಕ್ಲಬ್ ಸಹಯೋಗದೊಂದಿಗೆ ಸಮೀಪದ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಣ್ಣು ಪರೀಕ್ಷಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಳೆಯಾಧಾರಿತ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಣ್ಣಿನ ರಸಸಾರ ಕಡಿಮೆಯಾಗುವುದು ಕಾಣುತ್ತಿದೆ. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ೨ ವರ್ಷಕ್ಕೊಮ್ಮೆ ಮತ್ತು ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ೩ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಅದರ ವರದಿಗೆ ಅನುಸಾರವಾಗಿ ಸುಣ್ಣವನ್ನು ಜಮೀನಿಗೆ ಹಾಕಬೇಕು. ಇದರ ಜೊತೆಯಲ್ಲಿ ಪೋಷಕಾಂಶಕ್ಕನುಗುಣವಾಗಿ ಗೊಬ್ಬರವನ್ನು ಹಾಕಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ಹೀಗಾದಾಗ ಮಾತ್ರ ಮುಂದಿನ ತಲೆಮಾರಿಗೆ ಆರೋಗ್ಯಯುತವಾದ ಮಣ್ಣನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕಾಫಿ ಮಂಡಳಿ ಶನಿವಾರಸಂತೆ ವಲಯದ ವಿಸ್ತರಣಾಧಿಕಾರಿ ರಂಜಿತ್ ಕುಮಾರ್ ಮಾತನಾಡಿ, ಇಂತಹ ಕಾರ್ಯ ಕ್ರಮಗಳಿಂದ ಕೃಷಿಕರಿಗೆ ತಮ್ಮ ತೋಟದ ಮಣ್ಣಿನ ರಸಸಾರ ಎಷ್ಟಿದೆ ಎಂಬ ಮಾಹಿತಿ ಸಿಗುತ್ತದೆ. ಇದರಿಂದ ಮಣ್ಣಿನ ಪೋಷಕಾಂಶಗಳ ನಿರ್ವಹಣೆ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದರು. ರೋಟರಿ ಹೇಮಾವತಿ ಸಂಸ್ಥೆಯ ಅಧ್ಯಕ್ಷ ಅಮೃತ್ ಕುಮಾರ್ ಮಾತನಾಡಿ, ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್, ಕಾಫಿ ಸಂಶೋಧನಾ ಕೇಂದ್ರದ ಡಾ.ಶೀನಾಮೋಹನ್, ಲಕ್ಷಿö್ಮÃಕಾಂತ್, ಕಾಫಿ ಮಂಡಳಿಯ ವಲಯ ಕಚೇರಿ ಸಿಬ್ಬಂದಿಗಳಾದ ಸುಚಿತ್ರಾ, ಪ್ರಶಾಂತ್, ಥಾಮಸ್ ಮಣ್ಣು ಪರೀಕ್ಷಾ ಕಾರ್ಯ ನಡೆಸಿದರು. ಹೇಮಾವತಿ ರೋಟರಿ ಕಾರ್ಯದರ್ಶಿ ಭಾನುಪ್ರಕಾಶ್, ನಿರ್ದೇಶಕರಾದ ದುಶ್ಯಂತ್ ಊರುಗುತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳು ಕೃಷಿಕರ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೀಡಿದರು. ಇದರೊಂದಿಗೆ ಮಣ್ಣಿನ ರಸಸಾರ ಮತ್ತು ಪೋಷಕಾಂಶಗಳ ನಿರ್ವಹಣೆ ಸೇರಿದಂತೆ ಇತರೆ ಕಾಫಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು.