ಕೂಡಿಗೆ, ಫೆ. ೧೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಉದ್ದೇಶಿಸಿ ಚಿಕ್ಕತೂರು ಗ್ರಾಮದಲ್ಲಿ ಗುರುತಿಸಿರುವ ಜಾಗದ ಸರ್ವೆ ಕಾರ್ಯ ನಡೆಯಿತು.

ಕಳೆದ ೧೦ ವರ್ಷಗಳ ಹಿಂದೆ ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಕಾಯ್ದಿರಿಸಲಾಗಿದ್ದ ಜಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಸಭೆಯಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡುವ ಅಯ್ಕೆ ಪ್ರಕ್ರಿಯೆಗಳು ನಡೆಸಿ ೪೦೦ಕ್ಕೂ ಹೆಚ್ಚು ಫಲಾನುಭವಿಗಳ ಪಟ್ಟಿ ಸಿದ್ಧಗೊಂಡಿದೆ. ಅದರಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ನೀಡುವ ಪ್ರಕ್ರಿಯೆಗಳಿಗೆ ಸರ್ವೆ ಕಾರ್ಯ ಕಂದಾಯ ಇಲಾಖೆಯ ವತಿಯಿಂದ ಗ್ರಾಮ ಪಂಚಾಯತಿ ಸಹಯೋಗ ದೊಂದಿಗೆ ನಡೆದವು.

ಈಗಾಗಲೇ ಗುರುತಿಸಲ್ಪಟಿರುವ ಜಾಗದ ಹದ್ದುಬಸ್ತು ಸರ್ವೆಯನ್ನು ಕಂದಾಯ ಇಲಾಖೆಯ ಸರ್ವೆಯರ್ ಸಿದ್ದರಾಜು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಗೂ ಗ್ರಾಮಸ್ಥರು ಸಮ್ಮುಖದಲ್ಲಿ ಕೈಗೊಳ್ಳಲಾಯಿತು.

ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಭಾಸ್ಕರ್ ನಾಯಕ್ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚುವ ಸಲುವಾಗಿ ಚಿಕ್ಕತ್ತೂರು ಗ್ರಾಮದ ಸರ್ವೆ ನಂಬರ್ ೧೪ರಲ್ಲಿ ೪ ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಲೇಔಟ್ ನಕ್ಷೆ ತಯಾರಿಸಲು ಹದ್ದುಬಸ್ತು ಸರ್ವೆ ಕಾರ್ಯ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನಿವೇಶನ ರಹಿತರಿಗೆ ಜಾಗವನ್ನು ಅಭಿವೃದ್ಧಿಪಡಿಸಿ ನಿಯಮನುಸಾರ ಗ್ರಾಮ ಸಭೆಯಲ್ಲಿ ಫಲಾನುಭವಿ ಗಳನ್ನು ಆಯ್ಕೆ ಮಾಡಿ ನಿವೇಶನವನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಕರ ವಸೂಲಿಗಾರ ಅವಿನಾಶ್ ಮತ್ತು ಗಣೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.