ಮುಳ್ಳೂರು, ಫೆ. ೧೭: ಕೊಡಗು ಮತ್ತು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಹಾಸನ ಜಿಲ್ಲೆಗೆ ಸೇರಿದ ಹೊಸೂರು ಕೌಕೋಡಿ ಗ್ರಾಮದ ಹೊಸಕೋಟೆ ಬೆಟ್ಟದ ಅಂಚಿನಲ್ಲಿ ಉದ್ದೇಶಿಸಿರುವ ಗಣಿಗಾರಿಕೆಯನ್ನು ಉಭಯ ಜಿಲ್ಲೆಯ ಗ್ರಾಮಸ್ಥರು ವಿರೋಧಿಸಿದ್ದು, ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಸೇರಿದ್ದು, ಈ ಉಭಯ ಜಿಲ್ಲಾ ಭಾಗದಲ್ಲಿ ರೈತರು ಗ್ರಾಮಸ್ಥರು ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದಾರೆ. ಪಶ್ಚಿಮಘಟ್ಟ ಸಾಲಿನಲ್ಲಿರುವ ಹೊಸಕೋಟೆ ಕಲ್ಲು ಗಣಿಗಾರಿಕೆ ಮಾಡಲು ಸರಕಾರದಿಂದ ಅನುಮತಿ ಪಡೆದುಕೊಂಡು ಗಣಿಗಾರಿಕೆ ಮಾಡಲು ಸಿದ್ಧತೆ ಮಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಉಭಯ ಜಿಲ್ಲಾ ಭಾಗದ ರೈತರು ಪ್ರಮುಖರು ಗಣಿಗಾರಿಕೆ ಮಾಡುವುದನ್ನು ತಡೆಯಲು ಮತ್ತು ಇದನ್ನು ವಿರೋಧಿಸಿ ಹೋರಾಟ ಮಾಡುವ ಸಲುವಾಗಿ ಸಮೀಪದ ಶನಿವಾರಸಂತೆ ಗಡಿಭಾಗದಲ್ಲಿರುವ ಈಚಲಬೀಡು ಗ್ರಾಮದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ರೈತ ಮುಖಂಡ ಎಚ್.ಪಿ. ಪುಟ್ಟೇಗೌಡ ಮಾತನಾಡಿ, ಈ ಭಾಗದ ಜನರು ಪ್ರಕೃತಿಯ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದೇವೆ. ಪ್ರಕೃತಿ ನಾಶವಾದರೆ ನಮ್ಮ ಬದುಕು ನಾಶವಾದಂತೆ. ಹೀಗಿರುವಾಗ ಹೊರ ಭಾಗದವರು ಗಣಿಗಾರಿಕೆ ಮಾಡಲು ಇಲ್ಲಿಗೆ ಬಂದು ಜಾಗವನ್ನು ಖರೀದಿಸಿ ಪ್ರಕೃತಿ ನಾಶ ಮಾಡುವುದರ ಜೊತೆಯಲ್ಲಿ ಈ ಭಾಗದ ರೈತರ ಬದುಕನ್ನು ನಾಶ ಮಾಡಲು ಹೊರಟಿದ್ದಾರೆ. ಈ ಭಾಗದಲ್ಲಿ ಗಣಿಗಾರಿಕೆ ಮಾಡಲು ನಿವೃತ್ತ ಅಧಿಕಾರಿಗಳು, ಉನ್ನತ ಅಧಿಕಾರಿಗಳು ಪ್ರಭಾವಿಗಳು ಗಣಿಗಾರಿಕೆಗೆ ಅನುಮತಿ ಪಡೆದು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ನಿಟ್ಟಿನಲ್ಲಿ ಉಭಯ ಭಾಗದ ರೈತರೆಲ್ಲರೂ ಒಂದಾಗಿ ಗಣಿಗಾರಿಕೆಯನ್ನು ತಡೆಯುವ ಸಲುವಾಗಿ ಹೋರಾಟ ಮಾಡಬೇಕಾಗಿದೆ ಮತ್ತು ಗಣಿಗಾರಿಕೆಗೆ ಅನುಮತಿ ನೀಡದಂತೆ ಈಗಾಗಲೇ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದರು.

ಹಾಸನ ಜಿಲ್ಲಾ ಬೆಳೆಗಾರರ ಸಂಘದ ಡಾ. ರಾಮಚಂದ್ರ ಮಾತನಾಡಿ, ಪ್ರಕೃತಿಯ ರಕ್ಷಣೆ ರೈತರ ಜವಾಬ್ದಾರಿಯಾಗಿದ್ದು, ಪ್ರಕೃತಿ ಮಡಿಲಿನಲ್ಲಿ ವ್ಯವಸಾಯ ಮಾಡಿಕೊಂಡು ಬದುಕುತ್ತಿರುವ ರೈತರು ಪ್ರಕೃತಿ ನಾಶ ಮಾಡಲು ಬಿಡಬಾರದು ಎಂದರು.

ಕೊಡಗು ಜಿಲ್ಲೆಯ ತೋಳೂರುಶೆಟ್ಟಳ್ಳಿಯ ರೈತ ಮುಖಂಡ ಕೂತಿ ದಿವಾಕರ್ ಮಾತನಾಡಿ, ಕೊಡಗು ಮತ್ತು ಹಾಸನ ಪಶ್ಚಿಮಘಟ್ಟ ಸಾಲಿನ ಪ್ರಕೃತಿ ಮಡಿಲಿನಲ್ಲಿ ಜೀವನ ಸಾಗಿಸುತ್ತಿರುವ ರೈತರಾಗಿದ್ದೇವೆ. ಅದೆ ರೀತಿಯಲ್ಲಿ ನಾವೆಲ್ಲರೂ ಒಂದಾಗಿ ಪ್ರಕೃತಿ ರಕ್ಷಣೆ ಮಾಡಲು ಮುಂದಾಗಬೇಕಿದೆ. ಪಶ್ಚಿಮಘಟ್ಟ ಉಳಿಸಲು ಜಿಲ್ಲೆ, ಹೊರ ಜಿಲ್ಲೆ ಎಂಬ ತಾರತಮ್ಯ ಮಾಡದೆ ಗಣಿಗಾರಿಕೆ ಮಾಡುವುದನ್ನು ತಡೆಯಲು ನಾವೆಲ್ಲರೂ ಒಂದಾಗಿ ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ರೈತ ಪ್ರಮುಖರಾದ ಮಂಜೂರು ತಮ್ಮಣ್ಣಿ, ಹೊಸೂರು ಮದನ್, ಸುಬ್ರಮಣಿ, ವಿಠಲ, ಹೊಸೂರು ರಮೇಶ್, ಪುಟ್ಟಸ್ವಾಮಿ, ಕಳಲೆ ಕೃಷ್ಣೇಗೌಡ ಮುಂತಾದವರು ಹಾಜರಿದ್ದರು.

-ಭಾಸ್ಕರ್, ಮುಳ್ಳೂರು