ಗೋಣಿಕೊಪ್ಪಲು, ಫೆ. ೧೬: ಸಂವಿಧಾನ ಜಾಗೃತಿ ಜಾಥಾವು ಗೋಣಿಕೊಪ್ಪಲುವಿಗೆ ಆಗಮಿಸಿತು. ಸ್ಥಳೀಯ ಉಮಾಮಹೇಶ್ವರಿ ದೇವಾಲಯದ ಮುಂದೆ ನೆರೆದಿದ್ದ ನೂರಾರು ಸಾರ್ವಜನಿಕರು, ಸಂಘ ಸಂಸ್ಥೆಯ ಪ್ರಮುಖರು ಶಾಲಾ ವಿದ್ಯಾರ್ಥಿಗಳು ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮತ್ತು ಪಿಡಿಓ ಸಿಬ್ಬಂದಿ ವರ್ಗ ಆತ್ಮೀಯವಾಗಿ ಬರಮಾಡಿಕೊಂಡರು.

ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಎಂ. ಮಂಜುಳ, ಪಿಡಿಓ ತಿಮ್ಮಯ್ಯ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡುವ ಮೂಲಕ ಜಾಗೃತಿ ಜಾಥಾವನ್ನು ಬರಮಾಡಿಕೊಂಡರು. ನಂತರ ಬಲೂನ್ ಹಾರಿ ಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಸಂಜೀವಿನಿ ಸ್ತಿçà ಶಕ್ತಿ ಒಕ್ಕೂಟದ ಮಹಿಳಾ ಸದಸ್ಯರು ಕಲಶ ಹಿಡಿದು ಜಾಥಾದೊಂದಿಗೆ ಹೆಜ್ಜೆ ಹಾಕಿದರು. ಕಾವೇರಿ ಕಾಲೇಜಿನ ಎನ್‌ಎಸ್‌ಎಸ್‌ನ ವಿದ್ಯಾರ್ಥಿಗಳು ಗೋಣಿಕೊಪ್ಪ ಅನುದಾನಿತ ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅಂಬೇಡ್ಕರ್ ಬಗ್ಗೆ ಘೋಷಣೆ ಕೂಗುತ್ತ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್ ಹಾಗೂ ನಾಗರಹೊಳೆ ಜೇನು ಕುರುಬರ ಜಾನಪದ ನೃತ್ಯಗಳು ಗಮನ ಸೆಳೆದವು. ಮೆರವಣಿಗೆಯ ಮುಂಭಾಗದಲ್ಲಿ ಬೈಕ್‌ಗಳಲ್ಲಿ ಬಾವುಟಗಳನ್ನು ಹಿಡಿದ ತರುಣರು ಬೈಕ್ ಜಾಥಾದೊಂದಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದರು. ರಸ್ತೆಯ ಇಕ್ಕೆಲೆಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಾಗೃತಿ ಜಾಥಾವನ್ನು ವೀಕ್ಷಣೆ ಮಾಡಿದರು. ಕರ್ನಾಟಕ ಸರ್ಕಾರ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಗಣಪತಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಹಾಗೂ ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು

ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕು. ಪ್ರಪಂಚಕ್ಕೆ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಾಧನೆ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಗಿರಿಜನ ತಾಲೂಕು ಕಲ್ಯಾಣಾಧಿಕಾರಿಗಳಾದ ನವೀನ್ ಗ್ರಾ.ಪಂ. ಉಪಾಧ್ಯಕ್ಷೆ ಎಂ. ಮಂಜುಳ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಯ್ಯ, ದಸಂಸ ಮುಖಂಡರಾದ ಟಿ.ಎನ್. ಗೋವಿಂದಪ್ಪ, ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಉಪಸ್ಥಿತರಿದ್ದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಭಾಶ್ ಸ್ವಾಗತಿಸಿ, ವಂದಿಸಿದರು. ಶಾಲಾ ವಿದ್ಯಾರ್ಥಿ ಗಳಿಂದ ನಾಡಗೀತೆ ಮೊಳಗಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಯನ್ನು ಓದಲಾಯಿತು. ಕಾರ್ಯಕ್ರಮ ದಲ್ಲಿ ಗ್ರಾ.ಪಂ. ಕಾರ್ಯದರ್ಶಿ ರಾಜು, ಸಿಬ್ಬಂದಿ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ಸಂವಿಧಾನ ಜಾಗೃತಿ ಜಾಥಾವನ್ನು ಬೀಳ್ಕೊಡಲಾಯಿತು.