ಪೊನ್ನಂಪೇಟೆ, ಫೆ. ೧೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ನಂತರ ಎರಡು ಬಾರಿ ನಿಗದಿಯಾಗಿದ್ದ, ಪಂಚಾಯಿತಿ ಸಾಮಾನ್ಯ ಸಭೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಗಿದ್ದು, ಸಾರ್ವಜನಿಕ ಸಮಸ್ಯೆಗಳ ವಿಲೇವಾರಿಗೆ ತೊಂದರೆಯಾಗಿದೆ.

ನೂತನ ಅಧ್ಯಕ್ಷರ ಆಯ್ಕೆಯ ನಂತರ ತಾ.೧೪ ರಂದು ಪ್ರಥಮ ಬಾರಿಗೆ ಸಾಮಾನ್ಯ ಸಭೆ ಕರೆಯಲಾಗಿತ್ತು. ಅಂದು ಬಿಜೆಪಿ ಬೆಂಬಲಿತ ೧೧ ಸದಸ್ಯರು ಗೈರು ಹಾಜರಾದ ಕಾರಣ ಸಭೆಯನ್ನು ಮುಂದೂಡಿ, ತಾ.೧೭ ರಂದು ನಿಗದಿಗೊಳಿಸಲಾಗಿತ್ತು. ಈ ದಿನ ಕೂಡ ಅಮ್ಮತ್ತಿರ ಆರತಿ ಸುರೇಶ್ ಹೊರತು ಪಡಿಸಿ ಬಿಜೆಪಿ ಬೆಂಬಲಿತ ೧೧ ಸದಸ್ಯರು ಗೈರು ಹಾಜರಾಗಿದ್ದರಿಂದ ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಲಾಗಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಸಮಸ್ಯೆಗಳನ್ನೊಳಗೊಂಡ ಸುಮಾರು ೩೦ಕ್ಕೂ ಅರ್ಜಿಗಳು ವಿಲೇವಾರಿಗೆ ಬಂದಿದ್ದವು. ಆದರೆ, ಸಭೆ ನಡೆಯದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಜ.೩೦ ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿತ್ತು. ೨೦ ಸದಸ್ಯರ ಬಲ ಇರುವ ಪಂಚಾಯಿತಿಯಲ್ಲಿ ೧೨ ಬಿಜೆಪಿ ಬೆಂಬಲಿತ ಸದಸ್ಯರು, ೮ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದರು. ಆದರೆ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ೪ ಸದಸ್ಯರು ಅಡ್ಡ ಮತದಾನ ಮಾಡಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಸದಸ್ಯ ಅಣ್ಣಿರ ಹರೀಶ್ ಅಧ್ಯಕ್ಷರಾಗಿ, ಆಲಿರ ರಶೀದ್ ಉಪಾಧ್ಯಕ್ಷರಾಗಿ ಆಶ್ಚರ್ಯಕರ ರೀತಿಯಲ್ಲಿ ಆಯ್ಕೆಯಾಗಿದ್ದರು. ಬಿಜೆಪಿ ಬೆಂಬಲಿತ ಸದಸ್ಯರು ಆಣೆ ಪ್ರಮಾಣಗಳ ಮೊರೆ ಹೋದರೂ ಕೂಡ, ಅಡ್ಡ ಮತದಾನ ಮಾಡಿದವರು ಯಾರು..? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ವಿಭಿನ್ನ ಕಾರ್ಯ ವೈಖರಿಯ ಮೂಲಕ, ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿ ಮಾದರಿ ಗ್ರಾಮ ಪಂಚಾಯಿತಿ ಎನಿಸಿಕೊಂಡಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಆದಷ್ಟು ಬೇಗ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಪ್ರಗತಿಯ ಹಾದಿಯಲ್ಲಿ ಸಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ. -ಚನ್ನನಾಯಕ