ಮಡಿಕೇರಿ, ಫೆ. ೧೬: ಸುಂಟಿಕೊಪ್ಪದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾ. ೨೮ ರಂದು ಬೆಳಿಗ್ಗೆ ಸುಂಟಿಕೊಪ್ಪದ ಕೆ.ಎಂ. ಹಸೈನಾರ್ ಎಂಬವರಿಗೆ ಸೇರಿದ ಟಿನೇಜ್ ಬಟ್ಟೆ ಅಂಗಡಿಯ ಬೀಗ ಮುರಿದ ಕ್ಯಾಶ್ ಟೇಬಲ್‌ನಲ್ಲಿದ್ದ ರೂ. ೧ ಲಕ್ಷ ನಗದು, ವಾಚ್ ಹಾಗೂ ಬಟ್ಟೆಗಳು ಕಳವಾಗಿತ್ತು. ನಂತರ ನಿಲುಗಡೆ ಮಾಡಿದ್ದ ಹೆಚ್.ಕೆ. ಸುರೇಶ್ ಎಂಬವರ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬAಧ ಇಬ್ಬರು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.

ತಾ. ೧೦ ರಂದು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಚಿಕ್ಕಮಡೂರು ನಿವಾಸಿ ಮೊಹಮ್ಮದ್ ಅಶ್ರಫ್ (೪೩) ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿ ಪುತ್ತೂರಿನ ಇಜಾಜ್ ಎಂಬಾತನನ್ನು ಪತ್ತೆ ಮಾಡಿದ್ದು, ಆತನನ್ನು ಈಗಾಗಲೇ ಪುತ್ತೂರು ಪೊಲೀಸರು ಕಳವು ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ.

ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಸಿಪಿಐ ಕೆ. ರಾಜೇಶ್, ಪಿಎಸ್‌ಐ ಶ್ರೀಧರ್, ನಾಗರಾಜು ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ ಬಂಧಿತರಿAದ ರೂ. ೧೫ ಸಾವಿರ ನಗದು, ವಾಚ್, ಬಟ್ಟೆಗಳನ್ನು ವಶಪಡಿಸಿಕೊಂಡಿದೆ.