ಮಡಿಕೇರಿ, ಫೆ. ೧೬: ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್‌ಸಿ ಅರಣ್ಯ ಶಾಸ್ತç ಪದವೀಧರರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಕಳೆದ ಒಂಭತ್ತು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಸಾಗಿದ ವಿದ್ಯಾರ್ಥಿಗಳು ಜ. ತಿಮ್ಮಯ್ಯ ವೃತ್ತದಲ್ಲಿ ಸಮಾಗಮಗೊಂಡು ಅರಣ್ಯ ವಿದ್ಯಾರ್ಥಿಗಳ ಸಂಕಷ್ಟವನ್ನು ಪ್ರತಿಬಿಂಬಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು. ಅರಣ್ಯ ಶಿಕ್ಷಣ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಾವೇ ಗತಿ ಎಂದು ವಿಷ ಕುಡಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗವನ್ನು ನಾಟಕದಲ್ಲಿ ಪ್ರದರ್ಶಿಸಿದರು.

ನಂತರ ಮತ್ತೆ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸಿದರಲ್ಲದೆ, ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಸರಕಾರಕ್ಕೆ ಧಿಕ್ಕಾರ..!

ಪ್ರತಿಭಟನೆ ಹಾಗೂ ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ರಾಜ್ಯ ಸರಕಾರಕ್ಕೆ ಧಿಕ್ಕಾರ ಕೂಗಿದರಲ್ಲದೆ, ತಮ್ಮ ಬೇಡಿಕೆಗಳ ಬಗ್ಗೆ ಘೋಷಣೆ ಕೂಗಿದರು. ಮೆರವಣಿಗೆಯುದ್ದಕ್ಕೂ ಕ್ರಾಂತಿಕಾರಕ ಘೋಷಣೆಯೊಂದಿಗೆ ಕ್ರಾಂತಿಯ ಹೆಜ್ಜೆಯಂತಿರುವ ಬೀದಿ ನಾಟಕ ಪ್ರದರ್ಶನ ಮಾಡಿದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರುಗಳಿಗೆ ಬೆಂಬಲವಾಗಿ ಅರಣ್ಯ ಶಾಸ್ತç ಪದವಿ ಪೂರ್ಣಗೊಳಿಸಿ ಕೆಲಸ ಸಿಗದೇ ಇರುವ ಕೆಲವು ನಿರುದ್ಯೋಗಿ ಯುವಕ-ಯುವತಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಹಕಾರ ನೀಡಿದರು. ನಗರ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.