ಮಣಿಪುರ ಗಲಭೆ : ಎಸ್‌ಪಿ ಕಚೇರಿಗೆ ನುಗ್ಗಿದ ಕಿಡಿಗೇಡಿಗಳು

ಇಂಫಾಲ್, ಫೆ. ೧೬: ಕುಕಿ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಚುರಚಾಂದ್‌ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗಲಭೆ ನಡೆದಿದ್ದು, ಶುಕ್ರವಾರದಿಂದ ಐದು ದಿನಗಳವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಗಲಭೆ ನಡೆದಿದೆ. ಎಸ್‌ಪಿ ಕಚೇರಿ ಹಾಗೂ ಡೆಪ್ಯುಟಿ ಕಮಿಷನರ್ ಕಚೇರಿಗೆ ನುಗ್ಗಿ, ಸಾರ್ವಜನಿಕ ಆಸ್ತಿ ನಾಶಮಾಡಲಾಗಿದೆ. ಕೇಂದ್ರೀಯ ಸಶಸ್ತç ಪೊಲೀಸ್ ಪಡೆಯ (ಸಿಎಪಿಎಫ್) ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಎಸ್‌ಪಿ ಕಚೇರಿ ಆವರಣದಲ್ಲಿ ರಾಷ್ಟçಧ್ವಜವನ್ನು ಕೆಳಗಿಳಿಸಲಾಗಿದೆ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಾಜ ವಿರೋಧಿ ಶಕ್ತಿಗಳು ತಿರುಚಿದ ಚಿತ್ರಗಳು, ವಿಡಿಯೊಗಳು ಮತ್ತು ಪೋಸ್ಟ್ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವ ಆತಂಕವಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿಯಿಂದ ಪ್ರಾಣಹಾನಿ, ಸಾರ್ವಜನಿಕ ಆಸ್ತಿ ನಾಶ, ಸಾಮಾಜಿಕ ಶಾಂತಿ ಭಂಗ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು. ಹೀಗಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಮಣಿಪುರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಶಸ್ತಾçಸ್ತç ಹೊಂದಿದ್ದ ವ್ಯಕ್ತಿಯೊಂದಿಗೆ ಜಿಲ್ಲಾ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಒಬ್ಬರು ಇದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಕಾನ್‌ಸ್ಟೆಬಲ್ ಅನ್ನು ಗುರುವಾರ ಅಮಾನತು ಮಾಡಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಸರ್ಕಾರಿ ಕಚೇರಿಗಳ ಆವರಣಕ್ಕೆ ನುಗ್ಗಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಮಾನವ ಕಳ್ಳಸಾಗಣೆ - ೧೧ ಭಾರತೀಯರ ರಕ್ಷಣೆ

ಕಂಡು, ಫೆ. ೧೬: ಅಮೇರಿಕಾಕ್ಕೆ ತೆರಳಲು ನೆರವು ನೀಡುವುದಾಗಿ ಭರವಸೆ ನೀಡಿ ಕಳೆದ ಎರಡು ವಾರಗಳಿಂದ ಗೃಹಬಂಧನದಲ್ಲಿ ಇರಿಸಲಾಗಿದ್ದ ಭಾರತದ ೧೧ ಮಂದಿಯನ್ನು ನೇಪಾಳದಲ್ಲಿ ರಕ್ಷಿಸಲಾಗಿದೆ. ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ನೇಪಾಳ ಪೊಲೀಸರು, ಈ ಜಾಲದಲ್ಲಿ ಶಾಮೀಲಾಗಿದ್ದ ಒಬ್ಬ ನೇಪಾಳಿ ಹಾಗೂ ಎಂಟು ಮಂದಿ ಭಾರತೀಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವು ಬಾಲಿವುಡ್ ನಟ ಶಾರುಕ್‌ಖಾನ್ ನಟನೆಯ ‘ಡಂಕಿ' ಸಿನಿಮಾ ಕಥೆಗೆ ಹೋಲಿಕೆಯಾಗುತ್ತಿದ್ದ ಕಾರಣ, ನೇಪಾಳ ಪೊಲೀಸರು ಕಾರ್ಯಾಚರಣೆಯನ್ನು ‘ಆಪರೇಷನ್ ಡಂಕಿ' ಎಂದು ಹೆಸರಿಸಿದ್ದಾರೆ. ಸಂತ್ರಸ್ತರು ಮತ್ತು ಮಾಫಿಯಾದಲ್ಲಿ ಸಕ್ರಿಯವಾಗಿದ್ದ ಆರೋಪಿಗಳು ಭಾರತದ ಪಂಜಾಬ್ ಮತ್ತು ಹರಿಯಾಣ ರಾಜ್ಯದವರಾಗಿರಬಹುದು ಎನ್ನಲಾಗಿದೆ. ಸಂತ್ರಸ್ತರು ವಿದ್ಯಾರ್ಥಿಗಳು ಎನ್ನಲಾಗಿದೆ. ಮೆಕ್ಸಿಕೊ ಮಾರ್ಗವಾಗಿ ಅಮೆರಿಕಕ್ಕೆ ಕಳುಹಿಸಿಕೊಡುವುದಾಗಿ ಆಮಿಷವೊಡ್ಡಿ ಸಂತ್ರಸ್ತರನ್ನು ಕಂಡು ಹೊರವಲಯದ ಬಾಡಿಗೆ ಮನೆಯೊಂದರಲ್ಲಿ ಎರಡು ವಾರಗಳಿಗೂ ಹೆಚ್ಚು ಸಮಯದಿಂದ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಬಜೆಟ್-ವಿಪಕ್ಷಗಳಿಂದ ಟೀಕೆ

ಬೆಂಗಳೂರು, ಫೆ. ೧೬: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ ೧೫ನೇ ಬಜೆಟ್ ಮಂಡಿಸಿದ್ದು, ವಿಪಕ್ಷಗಳು ಆಯವ್ಯಯವನ್ನು ಟೀಕಿಸಿದ್ದಾರೆ. ‘ದಾಖಲೆಯ ೧೫ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ. ನಾನು ನನ್ನ ಜೀವಮಾನದಲ್ಲಿಯೇ ಇಂತಹ ಕಳಪೆ ಮುಂಗಡ ಪತ್ರವನ್ನು ನೋಡಿರಲಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್. ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಇದು ‘ಸಾಲರಾಮಯ್ಯನ ಸೋಗಲಾಡಿ' ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ‘ದೇಶದಲ್ಲಿ ಅಮೃತ ಕಾಲದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಸಿದ್ದರಾಮಯ್ಯ ಬಜೆಟ್ ನೋಡಿದ್ರೆ ಅಮೃತ ಅಲ್ಲ, ವಿಷ, ವಿನಾಶ ಕಾಲ ಎನ್ನುವುದು ತಿಳಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪಟ್ಟಿ ಬಿಡುಗಡೆಗೆ ವರಿಷ್ಠರ ಬುಲಾವ್ - ನಿಖಿಲ್

ರಾಮನಗರ, ಫೆ. ೧೬: ಲೋಕಸಭಾ ಚುನಾವಣೆಯ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಂಬAಧಿಸಿದAತೆ, ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಾನೂ ಕೂಡಾ ದೆಹಲಿಗೆ ಹೋಗುತ್ತಿದ್ದೇನೆ. ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿ, ೨೮ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಪಕ್ಷದ ಎಲ್ಲಾ ಮುಖಂಡರನ್ನ ಕರೆದು ಸಭೆ ಮಾಡಿದ್ದೇನೆ. ಶೀಘ್ರದಲ್ಲೇ ಆ ಭಾಗದ ಎಲ್ಲಾ ತಾಲೂಕುಗಳಿಗೂ ಪ್ರವಾಸ ಮಾಡುವೆ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ತಂತ್ರಗಾರಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಾನು ಮಂಡ್ಯದಿAದ ಸ್ಪರ್ಧೆ ಮಾಡಬೇಕು ಎಂದು ಅಲ್ಲಿನ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ೫ ಲಕ್ಷಕ್ಕಿಂತ ಅಧಿಕ ಮತಗಳನ್ನು ಕೊಟ್ಟಿದ್ದಾರೆ. ಅಲ್ಲಿನ ಜನತೆಗೆ ನಾನು ಚಿರರುಣಿಯಾಗಿರುವೆ. ಮತ್ತೆ ಸ್ಪರ್ಧಿಸುವ ಕುರಿತು ಮುಂದೆ ಚರ್ಚಿಸೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹೋರಾಟ ಮಾಡಬೇಕಿದೆ. ರಾಜ್ಯದ ೨೮ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮೋದಿ ಅವರಿಗೆ ಉಡುಗೊರೆ ನೀಡಲಿದ್ದೇವೆ ಎಂದರು.