ಸೋಮವಾರಪೇಟೆ, ಫೆ. ೧೬: ರಾಜ್ಯದ ಇತರ ಜಿಲ್ಲೆಗಳ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವ ಮಾದರಿಯಲ್ಲೇ ಕೊಡಗಿನ ಸಣ್ಣ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಆರ್. ಮಾಧವ ರೆಡ್ಡಿ ಕರೂರು ಒತ್ತಾಯಿಸಿದರು.
ರಾಜ್ಯದ ಹುಬ್ಬಳ್ಳಿಯಿಂದ ಹೊರಟಿರುವ ರೈತ ಸಂಕಲ್ಪ ಜಾಥಾ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ರೈತರೆ ಕಾಫಿ ಬೆಳೆಯುತ್ತಿದ್ದಾರೆ. ವಾಣಿಜ್ಯ ಬೆಳೆಯೆಂದು ಸರ್ಕಾರ ತಾರತಮ್ಯ ಮಾಡಬಾರದು. ದೇಶದ ರೈತರೆಲ್ಲರೂ ಒಂದೇ, ಪ್ರತಿಯೊಬ್ಬ ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲಗಾರರಾಗಿದ್ದಾರೆ. ಬ್ಯಾಂಕ್‌ಗಳ ಬಡ್ಡಿ, ಚಕ್ರಬಡ್ಡಿ ವಿಧಿಸುತ್ತ ಶೋಷಣೆ ಮಾಡುತ್ತಿದೆ ಎಂದು ದೂರಿದರು.
ಸರ್ಕಾರಕ್ಕೆ ಯಥೇಚ್ಚವಾದ ಸಂಪನ್ಮೂಲವಿದೆ. ರೈತರ ಎಲ್ಲಾ ಬೇಡಿಕೆಗಳನ್ನು ಒಂದೇ ವಾರದಲ್ಲಿ ಪೂರೈಸಬಹುದು. ಉದ್ಯಮಿಗಳ ಲಕ್ಷ ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕೃಷಿ ಚಟುವಟಿಕೆಗಾಗಿ ರೈತರು ಸಾಲ ಪಡೆದಿದ್ದಾರೆ. ಸಾಲದ ಮೇಲೆ ಬಡ್ಡಿ, ಚಕ್ರ ಬಡ್ಡಿ ಹಾಕುತ್ತಿದ್ದಾರೆ. ಸಾಲ ಮರುಪಾವತಿ ಮಾಡದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತಿದ್ದಾರೆ. ಸಾಲಕ್ಕಿಂತ ೪ ಪಟ್ಟು ಜಾಸ್ತಿ ಹಣವನ್ನು ಮರು ಪಾವತಿಸಲು ನೋಟೀಸ್ ಮಾಡು ತ್ತಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕ್‌ನ ಕಿರುಕುಳದಿಂದ ಘಾಸಿಗೊಂಡಿರುವ ಅನ್ನದಾತರಿಗೆ ಆತ್ಮವಿಶ್ವಾಸ ತುಂಬುವುದೇ ಜಾಥಾದ ಉದ್ದೇಶವಾಗಿದ್ದು, ಮಾರ್ಚ್ ೨೮ ರಂದು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು, ಸಾಲಗಾರ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೊಡಗಿನ ರೈತರು ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಸಾಲ ವಸೂಲಿ ನ್ಯಾಯಮಂಡಳಿ ಸ್ಥಾಪಿಸಿ, ಅನ್ನ ನೀಡುವ ರೈತನ ಮೇಲೆ ಕಾನೂನು ಪ್ರಯೋಗ ಮಾಡುತ್ತಿರುವುದು ಖಂಡನೀಯ ಎಂದ ಅವರು, ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲೇಬೇಕೆಂದು ರೈತ ಸಂಘ ನಿರಂತರ ಹೋರಾಟ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರುಗಳು ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಅದರ ಸೌಲಭ್ಯ ಬೆಳೆಗಾರರಿಗೆ ಇದುವರೆಗೆ ಸಿಕ್ಕಿಲ್ಲ ಎಂದು ದೂರಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಉಚಿತ ವಿದ್ಯುತ್ ಹಾಗೂ ಬೆಳೆಗಾರರ ಪಂಪ್ ಸೆಟ್‌ಗಳಿಗೆ ಉಪಯೋಗಿಸಿದ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಸರ್ಕಾರದ ವಿರುದ್ಧ ರೈತ ಸಂಘದಿAದ ನಿರಂತರ ಚಳುವಳಿ ರೂಪಿಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಹೇಳಿದರು.
ಬರಗಾಲ, ಅಕಾಲಿಕ ಮಳೆಯಿಂದ ಶೇ. ೬೦ ರಷ್ಟು ಕಾಫಿ ಫಸಲು ಹಾನಿಯಾಗಿದೆ. ಕಾಫಿ ತೋಟಗಳು ರೋಗಪೀಡಿತವಾಗಿವೆ. ಪ್ರತಿವರ್ಷ ಅಕಾಲಿಕ ಮಳೆಯಿಂದ ಫಸಲು ಹಾನಿಯಾಗುತ್ತಿದೆ. ನಿಗದಿತ ಸಮಯದಲ್ಲಿ ಹೂ ಮಳೆ ಬೀಳುತ್ತಿಲ್ಲ. ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸಿ ಕಾಫಿ ಉತ್ಪಾದನೆ ಮಾಡಬೇಕಿದೆ. ಉಚಿತ ವಿದ್ಯುತ್ ನೀಡಿದರೆ ಕಾಫಿ ಉತ್ಪಾದನೆ ಹೆಚ್ಚುತ್ತದೆ ಎಂದರು.
ತೆರಿಗೆ ಮತ್ತು ವಿದೇಶಿ ವಿನಿಮಯದಿಂದ ಕೋಟ್ಯಾಂತರ ರೂಪಾಯಿಯಷ್ಟು ಆದಾಯ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಈ ಬಜೆಟ್‌ನಲ್ಲಾದರೂ ಯಾವುದೇ ಷರತ್ತುಗಳಿಲ್ಲದೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರಿ ಆದೇಶ ಹೊರಡಿಸಬೇಕು. ವಿದ್ಯುತ್ ಬಾಕಿ ಮನ್ನಾ ಮಾಡಬೇಕು ಎಂದು ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಹೇಳಿದರು.
ಜಿಲ್ಲೆಯ ಸಹಕಾರ ಸಂಘಗಳಲ್ಲಿ ಸರ್ಕಾರಿ ನಿಯಮವನ್ನು ಮೀರಿ ಬಡ್ಡಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಂಘದ ಸಂಚಾಲಕ ಲಕ್ಷö್ಮಣ್ ದೂರಿದರು. ಶೇ. ೩ ರಷ್ಟು ಬಡ್ಡಿಗೆ ಕೃಷಿ ಸಾಲ ನೀಡಬೇಕೆಂಬ ನಿಯಮವಿದೆ. ಆದರೆ ಇಂದಿಗೂ ಶೇ. ೮, ೧೦ ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡ ಮಸಗೋಡು ಸುರೇಶ್ ಇದ್ದರು.