ಮಡಿಕೇರಿ, ಫೆ. ೧೭: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದ ಮಾಜಿ ಸೈನಿಕರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ ಕಾರ್ಯಪ್ಪ, ಜಿಲ್ಲೆಯಲ್ಲಿ ಸುಮಾರು ೧೫ ಸಾವಿರದಷ್ಟು ಮಾಜಿ ಸೈನಿಕರು, ಅವರ ಅವಲಂಬಿತರಿದ್ದು, ಕೆಲವೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರಕಾರಿ ಜಾಗ ಮಂಜೂರಾತಿ ಸಂಬAಧ ಸಲ್ಲಿಸಿದ ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ. ಮಾಜಿ ಸೈನಿಕರಿಗೆ ಜಾಗ ಮಂಜೂರಾತಿ ಆಗುತ್ತಿಲ್ಲ.

ಈ ಬಗ್ಗೆ ಕ್ರಮಕೈಗೊಳ್ಳಬೇಕು, ಮಾಜಿ ಸೈನಿಕರ ಸ್ವಾಧೀನದಲ್ಲಿ ಪೈಸಾರಿ ಜಾಗಗಳಿದ್ದು, ವ್ಯವಸಾಯ ಮಾಡಿಕೊಂಡ ಹಿನ್ನೆಲೆ ಹಕ್ಕುಪತ್ರ ನೀಡಲಾಗಿದೆ. ಆದರೆ, ತಹಶೀಲ್ದಾರ್ ವಿನಾಕಾರಣ ಹಕ್ಕುಪತ್ರ ರದ್ದುಗೊಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ಮಾಡಬೇಕು, ಮಾಜಿ ಸೈನಿಕರಿಗೆ ವೈದ್ಯಕೀಯ ಉದ್ದೇಶಕ್ಕೆ ಇರುವ ಇಸಿಹೆಚ್‌ಎಸ್ ಕ್ಲಿನಿಕ್‌ಗಳಿಗೆ ಖಾಯಂ ನಿವೇಶನ ಇಲ್ಲದ ಹಿನ್ನೆಲೆ ಜಾಗ ಒದಗಿಸಿಕೊಡಬೇಕು, ಪ್ರಶಸ್ತಿ ಪಡೆದ ಸೈನಿಕರಿಗೆ, ಹುತಾತ್ಮರಿಗೆ ಸರಕಾರದ ಆದೇಶ ಪ್ರಕಾರ ಸರಕಾರಿ ಜಮೀನು ನೀಡಬೇಕು, ೬ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೈನಿಕ ಅದಾಲತ್ ನಡೆಸಬೇಕು, ಮಾಜಿ ಸೈನಿಕರ ಸಂಘಕ್ಕೆ ಕರ್ಣಂಗೇರಿ ಗ್ರಾಮದಲ್ಲಿ ಜಾಗ ಮಂಜೂರಾಗಿದ್ದು, ಈ ಜಾಗ ಬದಲು ರಾಜಾಸೀಟ್ ಪಕ್ಕದಲ್ಲಿ ಕಾಯ್ದಿರಿಸಿರುವ ಜಾಗ ನೀಡಬೇಕು, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮಾಜಿ ಸೈನಿಕರ ರ‍್ಯಾಲಿ

ಗೋಣಿಕೋಪ್ಪಲಿನ ಕಾವೇರಿ ಕಾಲೇಜಿನಲ್ಲಿ ತಾ. ೨೫ ರಂದು ಬೆಳಿಗ್ಗೆ ೮ ಗಂಟೆಯಿAದ ಮುಖ್ಯಾಲಯ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಬೆಂಗಳೂರು ವತಿಯಿಂದ ಮಾಜಿ ಸ್ಯೆನಿಕರ ರ‍್ಯಾಲಿ ನಡೆಯಲಿದ್ದು, ಮಾಜಿ ಸೈನಿಕರು, ಅವರ ಅವಲಂಬಿತರು ಆಗಮಿಸುವಂತೆ ಬಿ.ಎ. ಕಾರ್ಯಪ್ಪ ಮನವಿ ಮಾಡಿದರು. ರ‍್ಯಾಲಿಯಲ್ಲಿ ದಕ್ಷಿಣ ಭಾರತದ ಮುಖ್ಯ ಭೂಸೇನಾಧಿಕಾರಿ ಲೆ.ಜ. ಎ.ಕೆ. ಸಿಂಗ್ (ಪಿ.ವಿ.ಎಸ್.ಎಂ., ಎ.ವಿ.ಎಸ್.ಎಂ., ವೈ.ಎಸ್.ಎಂ, ವಿ.ಎಸ್.ಎಂ, ಎಸ್.ಎಂ.) ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಮಾಜಿ ಸ್ಯೆನಿಕರು ಮತ್ತು ಅವರ ಅವಲಂಬಿತರು ಕುಂದು ಕೊರತೆಗಳು ಹಾಗೂ ಇತರೆ ಪಿಂಚಣಿ ಸಂಬAಧಿತ ಸಮಸ್ಯೆಗಳ ಪರಿಹಾರ ಕ್ಕಾಗಿ ಇದು ವೇದಿಕೆಯಾಗಲಿದೆ. ಹೆಚ್ಚಿನ ಮಾಹಿತಿಗೆ ಕರ್ನಲ್ ಅವಿನ್ ಉತ್ತಯ್ಯ ೭೫೨೯೦೩೧೬೧೬, ಸುಬೇದಾರ್ ಎಂ. ಸುಂದರ್ ರಾಜನ್ ೯೪೮೯೭೫೯೧೫೯ ಸಂಖ್ಯೆ ಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಮೇಜರ್ ಚಿಂಗಪ್ಪ, ಉಪಾಧ್ಯಕ್ಷ ಕರ್ನಲ್ ಚಿಣ್ಣಪ್ಪ, ಜಂಟಿ ಕಾರ್ಯದರ್ಶಿ ವಾಸಪ್ಪನ್, ಮಡಿಕೇರಿ ನಗರ ಅಧ್ಯಕ್ಷ ಪಿ.ಕೆ. ಕುಟ್ಟಪ್ಪ, ನಾಪೋಕ್ಲು ಅಧ್ಯಕ್ಷ ಕೆ.ಕೆ. ನಾಣಯ್ಯ ಹಾಜರಿದ್ದರು.