ಕುಶಾಲನಗರ, ಫೆ. ೧೮: ಕೊಡಗು ಜಿಲ್ಲೆಯ ಗ್ರಾಮ ಪಟ್ಟಣ ವ್ಯಾಪ್ತಿಗಳಲ್ಲಿ ಕಾವೇರಿ ನದಿ ಗಡಿ ಗುರುತು ಜಂಟಿ ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಟಗಳ ಅಭಿವೃದ್ಧಿ ಮಾಡಲು ಯೋಜನೆ ರೂಪಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜೀವನದಿ ಕಾವೇರಿಗೆ ಜಿಲ್ಲೆಯ ಗ್ರಾಮ ಪಟ್ಟಣಗಳಿಂದ ನಿರಂತರವಾಗಿ ಕಲುಷಿತ ತ್ಯಾಜ್ಯ ನೇರವಾಗಿ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅವೈಜ್ಞಾನಿಕ ಪ್ರವಾಸೋದ್ಯಮ ಮೂಲಕ ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುತ್ತಿದೆ.

ಈ ಮೂಲಕ ನದಿ ನೀರಿನ ಗುಣಮಟ್ಟ ಸಂಪೂರ್ಣ ಕುಸಿತ ಕಾಣುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದು ಮಡಿಕೇರಿ ತಾಲೂಕು, ವೀರಾಜಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ೨೨ ಗ್ರಾಮ ಪಂಚಾಯಿತಿ ಮತ್ತು ಒಂದು ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಕಾವೇರಿಗಾಗಿ ಕ್ರಿಯಾ ಯೋಜನೆ ರೂಪಿಸುವಂತೆ ಮನವಿ ಸಲ್ಲಿಸಲಾಯಿತು.

ಕಾವೇರಿ ನದಿ ಸಂರಕ್ಷಣೆಗಾಗಿ ಸರಕಾರದ ಮೂಲಕ ಅನುದಾನ ಕಲ್ಪಿಸುವುದು, ಹಂತ ಹಂತವಾಗಿ ಸ್ವಚ್ಛಕಾವೇರಿ ಯೋಜನೆ ಅನುಷ್ಠಾನಗೊಳಿಸುವುದು ಹಾಗೂ ನದಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಲು ಮನವಿ ಪತ್ರದಲ್ಲಿ ಕೋರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿ ವೆಂಕಟ ರಾಜ್, ಜಿಲ್ಲೆಯಲ್ಲಿ ಹರಿಯುವ ನದಿ ಜಲಮೂಲಗಳ ರಕ್ಷಣೆಗಾಗಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಸಂಬAಧ ಜಂಟಿ ಸರ್ವೆ ಕಾರ್ಯ ನಡೆಯಲಿದೆ ಎಂದು ಹೇಳಿದರು. ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಪುರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು, ನದಿ ತಟದ ಪ್ರವಾಸಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಪ್ಲಾಸ್ಟಿಕ್ ಬಾಟಲ್‌ಗಳನ್ನು ನಿಯಂತ್ರಣ ಮಾಡಲಾಗುವುದು, ಈಗಾಗಲೇ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನದಿ ಸಂರಕ್ಷಣೆಗಾಗಿ ಕಾರ್ಯಯೋಜನೆ ರೂಪಿಸಿದ್ದು ನದಿ ನೇರವಾಗಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸಂಬAಧಿಸಿದ ಪಂಚಾಯತಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.

ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ವೈಶಾಕ್, ಪ್ರವೀಣ್, ವನಿತಾ ಚಂದ್ರಮೋಹನ್ ಇದ್ದರು.