ಮಡಿಕೇರಿ, ಫೆ. ೧೮: ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿ ಎಂದು ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದರು. ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮದ ಸ್ವಚ್ಛತೆಗೆ ಹೆಚ್ಚು ಆಧ್ಯತೆ ನೀಡಬೇಕು. ಯಾವುದೇ ಸಾರ್ವಜನಿಕ ದೂರಗಳು ಬಾರದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರಿಗೆ ತಿಳಿಸಿದರು. ಸಭೆಯಲ್ಲಿ ವಿದ್ಯುತ್, ಜಲಜೀವನ್ ಮೀಷನ್ ಹಾಗೂ ಇನ್ನಿತರ ಯೋಜನೆಗಳ ಕುರಿತು ಚರ್ಚಿಸಲಾಯಿತು. ನಂತರ ಮನರೇಗಾ ಯೋಜನೆಯ ಕಾಮಗಾರಿ ಗಳ ಕಡತಗಳನ್ನು ಪರಿಶೀಲಿಸಿ ಮನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು. ಕಾಕೋಟುಪರಂಬು ಗ್ರಾ.ಪಂ. ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಕುರಿತು ಮಾಹಿತಿ ಪಡೆದರು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಆಹಾರದ ಗುಣಮಟ್ಟದ ಕುರಿತು ಖುದ್ದು ಪರಿಶೀಲಿಸಿದರು.

ಸಭೆಯಲ್ಲಿ ಕಾಕೋಟುಪರಂಬು ಗ್ರಾ.ಪಂ. ಅಧ್ಯಕ್ಷ ಬಟ್ಟಕಾಳಂಡ ಕಾಮಿ ಸುರೇಶ್ ಗ್ರಾ.ಪಂ. ಸರ್ವ ಸದಸ್ಯರು, ಮನರೇಗಾ ಸಹಾಯಕ ನಿರ್ದೇಶಕ ಎಂ.ಡಿ. ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಂಜುಳ, ತಾಂತ್ರಿಕ ಸಂಯೋಜಕರಾದ ನಿರಂಜನ್, ತಾಂತ್ರಿಕ ಸಹಾಯಕ ಅಭಿಯಂತರ ಆಶೀಕ್, ತಾಲೂಕು ಐ.ಇ.ಸಿ. ಸಂಯೋಜಕರಾದ ನರೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.