ಗೋಣಿಕೊಪ್ಪಲು, ಫೆ. ೧೮: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪೊನ್ನಂಪೇಟೆ ತಾಲೂಕು ಸಮಿತಿಯ ವತಿಯಿಂದ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿ ಅಂಗನವಾಡಿ ಕಾರ್ಯ ಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ತನ್ನ ನೀತಿಗಳ ಪರಿಕಲ್ಪನೆಯನ್ನು ಬದಲಾಯಿಸಿ ದೇಶದ ಅಭಿವೃದ್ಧಿಯ ಸಂಕೇತಗಳಾದ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ ಶೇ. ೯೦ ರಿಂದ ಶೇ. ೬೦ ಪಾಲನ್ನು ಕಡಿತ ಮಾಡಿ ೨೦೨೧ರ ಬಜೆಟ್‌ನಲ್ಲಿ ೮೫೪೨ ಕೋಟಿ ರೂಗಳನ್ನು ೨೦೨೪ ರ ಬಜೆಟ್‌ನಲ್ಲಿ ೩೦೦ ಕೋಟಿ ರೂ.ಗಳನ್ನು ಕಡಿತ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷÀ ಹೆಚ್.ಬಿ. ರಮೇಶ್, ಬಡವರ ಮತ್ತು ಜನ ಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ಹಾಕಲಿ. ೨೦೧೮ರಿಂದ ಈ ನೌಕರರಿಗೆ ಒಂದೂ ರೂಪಾಯಿಯನ್ನು ಹೆಚ್ಚಳ ಮಾಡದೆ ಚುನಾವಣೆಗಳು, ಮಾತೃವಂದನಾ, ಪೋಷಣ್ ಟ್ರಾ÷್ಯಕರ್, ಸರ್ವೆ, ಗೃಹಲಕ್ಷಿ÷್ಮ ಮುಂತಾದ ಕೆಲಸಗಳನ್ನು ಹೇರಲಾಗುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪೊನ್ನಂಪೇಟೆ ತಾಲೂಕು ಸಮಿತಿಯ ಅಧ್ಯಕ್ಷೆ ವಿ.ಎಸ್. ಸುಮಿತ್ರ ಮಾತನಾಡಿ, ಅಂಗನವಾಡಿ, ಬಿಸಿಯೂಟ ಯೋಜನೆ, ಆಶಾಕಾರ್ಯಕರ್ತರಿಗೆ ಸಿಗಬೇಕಾದ ನ್ಯಾಯಯುತ ವೇತನ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅದೀನದಲ್ಲಿ ಕೆಲಸ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ. ೩೧ ಸಾವಿರ ವೇತನ, ನಿವೃತ್ತಿ ಹೊಂದಿದ ನೌಕರರಿಗೆ ರೂ. ೧೦ ಸಾವಿರ ಪಿಂಚಣಿ ನೀಡಬೇಕು. ಕೆಲಸ ನಿರ್ವಹಣೆಗೆ ಮೊಬೈಲ್ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪೊನ್ನಂಪೇಟೆ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಸಿ.ನಳಿನಾಕ್ಷಿ, ಖಜಾಂಚಿ ಹೆಚ್.ಆರ್. ರಾಜೇಶ್ವರಿ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ತಹಶೀಲ್ದಾರ್ ಪರವಾಗಿ ಕಚೇರಿಯ ಅಧಿಕಾರಿಗಳು ಮನವಿ ಪತ್ರವನ್ನು ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.