ವೀರಾಜಪೇಟೆ, ಫೆ. ೧೮: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಸಂಯುಕ್ತ ಜಂಟಿ ಸಮಿತಿಗಳ ವತಿಯಿಂದ ವೀರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ತಲುಪಿಸುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಪ್ರತಿಭಟನೆ ಸಂದರ್ಭ ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ಅವರು ಮಾತನಾಡಿ ದಿನ ದಿನಕ್ಕೆ ಅಗತ್ಯ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ದೇಶಕ್ಕೆ ಸ್ವಾತಂತ್ರö್ಯ ಬಂದು ೭೬ ವರ್ಷಗಳು ಕಳೆದರೂ ಬಡ ಕಾರ್ಮಿಕರಿಗೆ ಮೂಲ ಸೌಲಭ್ಯಗಳೇ ದೊರಕಿಲ್ಲ. ಹಿಂದೆ ರೂ.೬೦೦ ಇದ್ದ ಗ್ಯಾಸ್ ಸಿಲಿಂಡರ್ ಈಗ ೧೦೦೦ ರೂ, ಆಗಿದೆ. ಅಂಗನವಾಡಿ ಕಾರ್ಯಕರ್ತರು ಸಂಭಾವನೆಗಾಗಿ ಹೋರಾಟಗಳನ್ನು ನಡೆಸುವಂತ ಪರಿಸ್ಥಿತಿ ಬಂದಿದೆ. ಬಿಸಿಯೂಟ ನೌಕರರಿಗೆ ೩-೪ ತಿಂಗಳಿಗೊಮ್ಮೆ ಸಂಭಾವನೆ ನೀಡಲಾಗುತ್ತಿದೆ ಹಾಗೂ ನಿವೃತ್ತರಿಗೆ ಇದುವರೆಗೆ ಯಾವುದೇ ಸಹಾಯಧನ ನೀಡಿಲ್ಲ ಎಂದರು.

ರೈತ ಸಂಘದ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ಇಂದು ಕಾರ್ಮಿಕರು ಮತ್ತು ರೈತರು ಸೇರಿ ದೇಶದಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ, ಆದರೆ ರೈತರು ಬೆಳೆದ ಬೆಳೆಗೆ ಬೆಲೆಯೇ ಇಲ್ಲದಂತಾಗಿದೆ. ಈ ಸಂಬAಧ ಕೇಂದ್ರ ಸರಕಾರ ಗಮನ ಹರಿಸಬೇಕಾಗಿದೆ ಎಂದರು.

ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪ ಅವರು ಮಾತನಾಡಿ ಬಿಸಿಯೂಟ ನೌಕರರಿಗೆ ರೂ, ೩,೭೦೦ ಸಂಭಾವನೆ ನೀಡಲಾಗುತ್ತಿದೆ. ಅವರಿಗೆ ಸರಕಾರ ಸಮಾನ ಕೆಲಸಕ್ಕೆ ಸಮಾನ ಸಂಭಾವನೆ ನೀಡುವಂತೆ ಒತ್ತಾಯಿಸಿದರು.

ಕೃಷಿಕರಾದ ಚಾಮಿಯಾಲದ ಹನೀಫ್, ತೋಟ ಕಾರ್ಮಿಕ ಸಂಘಟನೆಯ ಸೀನಾ ಮೇಸ್ರಿ, ಹಮೀಧ್, ಬಿಸಿಯೂಟ ಸಂಘಟನೆಯ ತಾಲೂಕು ಅಧ್ಯಕ್ಷೆ ನ್ಯಾನ್ಸಿ, ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಎ.ವಿ. ಶೀಲಾ ಅವರುಗಳು ಮಾತನಾಡಿದರು.

ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಸಮಿತಿಯ ಹರಿದಾಸ್, ಹಮೀಧ್, ಅಂಗನವಾಡಿ ಕಾರ್ಯಕರ್ತರ ಸಂಘಟನೆಯ ಕಾರ್ಯದರ್ಶಿ ಲೀಲಾವತಿ, ಖಜಾಂಚಿ ಅರ್ಚನಾ ಹಾಗೂ ತಾಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು.