ಮಡಿಕೇರಿ, ಫೆ. ೧೮: “೨೦೨೩-೨೪ ಸಾಲಿನ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣೆ ಕಾಯ್ದೆ-೨೦೦೫ ಹಾಗೂ ನಿಯಮ ೨೦೦೬ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ೨ ದಿನಗಳ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇವರ ಸಹಯೋಗದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಅದಕ್ಕಾಗಿಯೇ ರೂಪಿಸಿರುವ ಕಾನೂನನ್ನು ಪ್ರತಿಯೊಬ್ಬ ಮಹಿಳೆಯೂ ಬಳಸಿಕೊಳ್ಳಬೇಕು ಎಂದರು.

ಜನನದಿಂದ ಹಿಡಿದು ಮರಣದವರೆಗೂ ಸುಮಾರು ೬೦೦ ಕಾನೂನನ್ನು ರಚಿಸಲಾಗಿದ್ದು, ಪ್ರತಿಯೊಬ್ಬರಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಇಂತಹ ಕಾನೂನು ಅರಿವು ಕಾರ್ಯಕ್ರಮಗಳನ್ನು ಮಹಿಳೆ ಹಾಗೂ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಮೀನಾಕುಮಾರಿ ಮಾತನಾಡಿ, ನಾಲ್ಕು ಗೋಡೆ ನಡುವೆ ವಾಸಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಈ ಕಾನೂನು ಅನ್ವಯಿಸುತ್ತದೆ. ಯಾವ ಮಹಿಳೆ ದೂರು ನೀಡಲು ಹಿಂಜರಿಯುತ್ತಾರೊ ಅಂತಹ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ನಂತರ ಸುರೇಶ್ ಎಚ್ ಅವರು ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಮತಿ ಅವರು ಮಕ್ಕಳಿಗೆ ಭಾವನಾತ್ಮಕವಾಗಿ ಮಾತನಾಡಿ ಕೌನ್ಸೆಲಿಂಗ್ ಮಾಡಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪೊಲೀಸ್ ಠಾಣೆಗಳಲ್ಲಿ ದೂರು ನೀಡಬಹುದು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಕುಮುದಿನಿ ಮಾತನಾಡಿ, ಲೈಂಗಿಕ ದೌರ್ಜನ್ಯ ನಡೆದರೆ, ೨೪ ಗಂಟೆಗಳಲ್ಲಿ ಶಿಕ್ಷಕರು ಮಕ್ಕಳ ವಿಶೇಷ ಪೊಲೀಸರಿಗೆ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ವಿಳಂಬ ಮಾಡಿದ್ದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ ಅವರು ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆಯಡಿ ಮಹಿಳೆಯರಿಗೆ ನಡೆಯುವ ದೌರ್ಜನ್ಯ, ಡಿಐಆರ್ ಸಲ್ಲಿಕೆ, ಆಪ್ತ ಸಮಾಲೋಚನೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ಮೂರು ತಾಲೂಕಿನ ಸಂರಕ್ಷಣಾಧಿಕಾರಿಗಳು, ಸಾಂತ್ವನ, ಸಖಿ ಒನ್ ಸ್ಟಾಪ್ ಸೆಂಟರಿನ ಸಿಬ್ಬಂದಿಗಳು, ಸಮಾಲೋಚಕರು, ಆರೋಗ್ಯ ಇಲಾಖಾ ಅಧಿಕಾರಿಗಳು ಮತ್ತು ಅಧೀನ ಸಿಬ್ಬಂದಿಗಳು, ಹಾಜರಿದ್ದರು.

ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಮಲ ಕೆ.ಜಿ ಸ್ವಾಗತಿಸಿದರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ಜೋಯಪ್ಪ ನಿರೂಪಿಸಿದರು, ಜಯಂತಿ ಪಿ.ಕೆ. ವಂದಿಸಿದರು.