,ಫೆ.೧೮: ತಾಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಕಾಫಿ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ರಸ್ತೆ ಬದಿಯ ಕುರುಚಲು ಕಾಡಿಗೆ ಬೆಂಕಿ ಬಿದ್ದು ಅದು ಕಾಫಿ ತೋಟಕ್ಕೂ ಹಬ್ಬಿದ ಪರಿಣಾಮ, ತೋಟದಲ್ಲಿದ್ದ ಗಿಡಗಳು ಸುಟ್ಟು ಕರಕಲಾಗಿವೆ. ತಕ್ಷಣ ಗ್ರಾಮಸ್ಥರು ಜಾಗೃತರಾಗಿ ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಿದ ನಂತರ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಭಾಗದಲ್ಲಿ ಕೋಟೆಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಬಿರು ಬಿಸಿಲಿನ ವಾತಾವರಣವಿದ್ದು, ಧಗೆ ಅಧಿಕವಾಗಿದೆ. ಮರದ ಎಲೆಗಳು ಒಣಗಿ ರಸ್ತೆಯ ಬದಿಯಲ್ಲಿ ಬಿದ್ದಿರುವುದರಿಂದ ಅಗ್ನಿ ಅವಘಡಗಳು ಹೆಚ್ಚುತ್ತಿವೆ. ಈ ಪ್ರದೇಶದಲ್ಲೂ ಇದೇ ಸನ್ನಿವೇಶವಿದ್ದು, ಯಾರೋ ಧೂಮಪಾನ ಮಾಡಿ, ಸಿಗರೇಟನ್ನು ಇಲ್ಲಿ ಎಸೆದಿರಬಹುದು. ಅದು ಹೊತ್ತಿಕೊಂಡು ಬೆಂಕಿ ಹಬ್ಬಲು ಕಾರಣವಾಗಿರಬಹುದು ಎಂದು ಸ್ಥಳೀಯ ನಿವಾಸಿ ಗೀಜಿಗಂಡ ಲೋಕೇಶ್ ಅಭಿಪ್ರಾಯಿಸಿದ್ದಾರೆ.

ಬೇಸಿಗೆ ಹೆಚ್ಚಾಗುತ್ತಿರುವುದರಿಂದ ತೋಟಗಳು ಒಣಗುತ್ತಿವೆ. ರಸ್ತೆ ಬದಿಯಲ್ಲಿ ಎಲೆಗಳು ಒಣಗಿ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಮೋಜು ಮಸ್ತಿಗೆ ಆಗಮಿಸುವ ಪ್ರವಾಸಿಗರು ಧೂಮಪಾನ ಮಾಡಿ ಎಸೆದರೆ ಕ್ಷಣಮಾತ್ರದಲ್ಲಿ ಕಾಡ್ಗಿಚ್ಚು ಹಬ್ಬುತ್ತದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.