ಪಾಲಿಬೆಟ್ಟ, ಫೆ ೧೯: ಹುಲಿ ದಾಳಿಗೆ ಗಬ್ಬದ ಹಸು ಬಲಿಯಾಗಿರುವ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟ ಗ್ರಾಮದಲ್ಲಿ ನಡೆದಿದೆ.

ತೂಬನಕೊಲ್ಲಿ ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಸ್ಥಳಕ್ಕೆ ತೆರಳಿದಾಗ ಹಸುವಿನ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಟ್ಟ ಗ್ರಾಮದ ಪ್ರವೀಣ್ ಎಂಬವರ ಮೇಯಲು ಬಿಟ್ಟಿದ್ದ ಗಬ್ಬದ ಹಸು ಕಳೆದ ಮೂರು ದಿನಗಳಿಂದ ಕಾಣೆಯಾಗಿತ್ತು. ಈ ಬಗ್ಗೆ ಹುಡುಕಾಟದಲ್ಲಿದ್ದ ಪ್ರವೀಣ್ ಹುಲಿ ದಾಳಿಗೆ ಹಸು ಬಲಿಯಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹುಲಿ ದಾಳಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪತ್ರಿನಿತ್ಯ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳು ಈ ಭಾಗದಲ್ಲೆ ಸಂಚರಿಸುತ್ತಿದ್ದು ಹುಲಿ ದಾಳಿಯಿಂದ ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು .

ಹುಲಿ ಚಲನವಲನ ಪತ್ತೆ ಹಚ್ಚಲು ಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

-ಪುತ್ತಂ ಪ್ರದೀಪ್